ಕೋಟ್ಯಾಂತರ ದೇಶ ಭಕ್ತರ ಕನಸು ನನಸಾಯಿತು- ಪ್ರಧಾನಿ ಮೋದಿ

ಆರ್ಟಿಕಲ್ 370ನ್ನು ರದ್ದು ಮಾಡಬೇಕೆಂದು ಅದೆಷ್ಟೋ ಭಾರತೀಯರ ಕನಸಾಗಿತ್ತಲ್ಲದೆ ಇದೊಂದು ಕಾಶ್ಮೀರಕ್ಕೆ ಅಂಟಿದ್ದ ಶಾಪವಾಗಿತ್ತು. ಮೋದಿಜೀ, ಷಾ, ಅಜಿತ್ ದೋವಲ್‍ರ ಮಾಸ್ಟರ್ ಮೈಂಡ್ ನಿಂದಾಗಿ ಕೊನೆಗೂ ರಾಜ್ಯಸಭೆಯಲ್ಲಿ ಅಮಿತ್ ಷಾ ಕಲಂ 370 35(ಎ) ರದ್ಧತಿ ವಿಚಾರ ತಿಳಿಸಿದಾಗ ಇಡೀ ದೇಶಕ್ಕೆ ದೇಶವೇ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಕೊನೆಗೂ ಕಾಶ್ಮೀರಕ್ಕೆ ಅಂಟಿದ್ದ ಶಾಪವನ್ನು ವಿಮೋಚನೆಗೊಳಿಸಿದ್ದರು ಮೋದಿಜೀ.. ಆ ಪ್ರಯುಕ್ತ ದೇಶವನ್ನುದ್ಧೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಜೀ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾಗಿದ್ದು ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಇಡೀ ರಾಷ್ಟ್ರದ ಜನರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ. ಒಂದು ರಾಷ್ಟ್ರ, ಒಂದು ಕುಟುಂಬ, ನೀವು, ನಾನು, ಇಡೀ ದೇಶ ಒಟ್ಟಾಗಲು ದೇಶವು ಈ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲು ನಿರ್ಧರಿಸಿತು. 370 ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಜನರನ್ನು ಯಾವುದೇ ಅಭಿವೃದ್ಧಿಯಿಲ್ಲದಂತೆ ಮಾಡಿತ್ತು. ಇದೀಗ ಅದನ್ನು ತೆಗೆದುಹಾಕಲಾಗಿದ್ದು ಇಲ್ಲಿಯವರೆಗೆ ಒಂದು ದೇಶಕ್ಕೆ ಎರಡು ಸಂವಿಧಾನವಿತ್ತು ಆದರೆ ಇನ್ಮುಂದೆ ಒಂದೇ ಕಾನೂನು.

ಕೋಟ್ಯಾಂತರ ದೇಶ ಭಕ್ತರ ಕನಸು ನನಸಾಗಿದೆ!

ಸರ್ದಾರ್ ಪಟೇಲ್, ಬಾಬಾ ಸಾಹೇಬ್ ಅಂಬೇಡ್ಕರ್, ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ, ಅಟಲ್ ಜೀ ಮತ್ತು ಕೋಟ್ಯಂತರ ದೇಶಭಕ್ತರ ಕನಸು ಈಡೇರಿದೆ. ಅವರ ಕನಸನ್ನು ನಾವು ಪೂರ್ಣಗೊಳಿಸಿದ್ದೇವೆ. 370 ನೇ ವಿಧಿಯನ್ನು ರದ್ದುಪಡಿಸುವುದನ್ನು ಜನರು ಕೈಬಿಟ್ಟರು ಏಕೆಂದರೆ ಅದರಿಂದ ಏನೂ ಬದಲಾಗುವುದಿಲ್ಲ ಎಂದು ಅವರು ತಿಳಿದಿದ್ದರು. ಆರ್ಟಿಕಲ್ 370 ಜಮ್ಮು, ಕಾಶ್ಮೀರ ಮತ್ತು ಲಡಾಖ್ ಜನರ ಮೇಲೆ ಹೇಗೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬ ಕುರಿತು ಯಾವುದೇ ಚರ್ಚೆ ನಡೆದಿಲ್ಲದಿರುವುದೇ ಆಶ್ಚರ್ಯಕರವಾಗಿದೆ. ಆ ವಿಧಿಯು ಜನರಿಗೆ ಹೇಗೆ ಲಾಭವನ್ನು ತಂದುಕೊಡುತ್ತಿತ್ತು ಎನ್ನುವುದನ್ನು ಯಾರು ಹೇಳಲು ಸಾಧ್ಯವಾಗಲಿಲ್ಲ ಎಂದರು.

ಇನ್ನುಮುಂದೆ ದೇಶದ ಉಳಿದ ರಾಜ್ಯಗಳ ನಾಗರಿಕರಂತೆ ಅಭಿವೃದ್ದಿಯ ಹಾದಿಯಲ್ಲಿ ಸಾಗಬಹುದು!

ನಾವು ಒಂದು ರಾಷ್ಟ್ರವಾಗಿ, ಒಂದು ಕುಟುಂಬವಾಗಿ, ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್‍ನ ಸಹೋದರರು ಮತ್ತು ಸಹೋದರಿಯರು ಅನೇಕ ಹಕ್ಕುಗಳಿಂದ ವಂಚಿತರಾಗಿದ್ದಾರೆ ಮತ್ತು ಅವರ ಅಭಿವೃದ್ಧಿಗೆ ಇದು ಒಂದು ದೊಡ್ಡ ಅಡಚಣೆಯಾಗಿತ್ತು. ಇದೀಗ ವಿಶೇಷ ಸ್ಥಾನಮಾನ ರದ್ದು ಆಗಿರುವುದರಿಂದ ಅವರೂ ದೇಶದ ಉಳಿದ ರಾಜ್ಯಗಳ ನಾಗರಿಕರಂತೆ ಅಭಿವೃದ್ದಿಯ ಹಾದಿಯಲ್ಲಿ ಮುಂದುವರಿಯಬಹುದು. ವಿಶೇಷ ಸ್ಥಾನಮಾನದ ಕಾರಣ, ಜಮ್ಮು ಮತ್ತು ಕಾಶ್ಮೀರಕ್ಕೆ ನಿಜವಾಗಿ ಸಿಗಬೇಕಿದ್ದ ಅಭಿವೃದ್ಧಿ ಅವಕಾಶವನ್ನು ಪಡೆಯಲು ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದರು.

ದೇಶದ ವಿವಿಧ ರಾಜ್ಯಗಳಲ್ಲಿನ ಪೌರಕಾರ್ಮಿಕರು ಪೌರಕಾರ್ಮಿಕ ಕಾಯಿದೆಯಡಿಯಲ್ಲಿ ಬರುತ್ತಾರೆ. ಆದರೆ ಜಮ್ಮು ಮತ್ತು ಕಾಶ್ಮೀರದ ಪೌರ ಕಾರ್ಮಿಕರು ಇದರಿಂದ ವಂಚಿತರಾಗಿದ್ದರು. ದೇಶದ ಹಲವು ರಾಜ್ಯಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆಯಲು ಬಲಿಷ್ಟ ಕಾನೂನುಗಳಿವೆ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅದು ಸಾಧ್ಯವಿರಲಿಲ್ಲ. 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಜನರು ಕೇಂದ್ರ ಸರ್ಕಾರದ ಸಾಮಾಜಿಕ ಕಲ್ಯಾಣ ಕಾನೂನು ಮತ್ತು ಯೋಜನೆಗಳನ್ನು ಪಡೆಯಲು ಬಿಡಲಿಲ್ಲ. ಇದರಿಂದಾಗಿ ಕೇಂದ್ರದ ಯೋಜನೆಗಳು ಜನರನ್ನು ತಲುಪುತ್ತಿರಲಿಲ್ಲ ಎಂದು ಹೇಳಿದರು.

ಶಿಕ್ಷಣದಿಂದ ವಂಚಿತರಾಗಿದ್ದಾರೆ ಕಾಶ್ಮೀರ ವಿದ್ಯಾರ್ಥಿಗಳು..

ದೇಶದ ಪ್ರತಿರಾಜ್ಯದ ಮಕ್ಕಳಿಗೆ ಶಿಕ್ಷಣದ ಅಗತ್ಯವಿದೆ. ಶಿಕ್ಷಣದಿಂದ ಕಾಶ್ಮೀರ ವಿದ್ಯಾರ್ಥಿಗಳು ವಂಚಿತರಾಗಿದ್ದರು. 1.5 ಕೋಟಿ ಜನರಿಗೆ ಯಾವುದೇ ಯೋಜನೆ ಸಿಕ್ಕಿರಲಿಲ್ಲ. ವಿಶೇಷವಾಗಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಕಾಶ್ಮೀರದ ಸಾರಿಗೆ ಸಂಪರ್ಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಪಾರದರ್ಶಕವಾಗಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುತ್ತೇವೆ. ಜಮ್ಮು-ಕಾಶ್ಮೀರದ ನಿವಾಸಿಗಳ ಮೇಲೆ ನನಗೆ ವಿಶ್ವಾಸವಿದೆ. ಪ್ರತ್ಯೇಕತಾವಾದವನ್ನು ಅವರು ನಿವಾರಿಸಲಿದ್ದಾರೆ. ಕೇಂದ್ರಾಡಳಿತ ಪ್ರದೇಶ ಲಡಾಖ್‍ನ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಪ್ರವಾಸೋದ್ಯಮ ಪ್ರದೇಶವಾಗಿ ಅಭಿವೃದ್ಧಿಪಡಿಸಲಾಗುವುದು. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ. ಲಡಾಖ್‍ನಲ್ಲಿ ಆಸ್ಪತ್ರೆ, ಶಾಲಾ-ಕಾಲೇಜುಗಳ ಸ್ಥಾಪನೆ ಮಾಡಲಾಗುತ್ತದೆ ಮತ್ತು ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರದ ಜನರಿಗೆ ತಮ್ಮ ಸ್ಥಳೀಯ ಪ್ರತಿನಿಧಿಗಳನ್ನು ಮೊದಲಿನಂತೆಯೇ ಆಯ್ಕೆ ಮಾಡುವುದಕ್ಕೆ ಅವಕಾಶವಿರಲಿದೆ ಎಂದು ಮೋದಿ ಹೇಳಿದ್ದಾರೆ.”ಅವರು ಮುಕ್ತ ಮತ್ತು ನ್ಯಾಯಯುತವಾದ ಪಂಚಾಯತ್ ಚುನಾವಣೆಗಳನ್ನು ಕಾಣಲಿದ್ದಾರೆ. ಅದೇ ರೀತಿ ವಿಧಾನಸಭಾ ಚುನಾವಣೆಗಳು ಸಹ ನಡೆಯಲಿವೆ. ಎರಡು-ಮೂರು ದಶಕಗಳಿಂದ ಬಾಕಿ ಇರುವ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ ಅನ್ನು ನೇಮಕ ಮಾಡುವಂತೆ ನಾನು ರಾಜ್ಯಪಾಲರನ್ನು ಒತ್ತಾಯಿಸುತ್ತೇನೆ” ಜಮ್ಮು ಮತ್ತು ಕಾಶ್ಮೀರದ ಜನರಿಗೆ ಶೀಘ್ರದಲ್ಲೇ ಮುಕ್ತ ಮತ್ತು ನ್ಯಾಯಯುತ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಅವಕಾಶ ದೊರಕಲಿದೆ ಎಂದು ನಾನು ಭರವಸೆ ನೀಡುತ್ತೇನೆ” ಎಂದು ಮೋದಿ ಜನರಿಗೆ ಭರವಸೆ ನೀಡಿದ್ದಾರೆ. ಒಟ್ಟಾರೆಯಾಗಿ ಮೋದಿ ಸರ್ಕಾರದ ಪ್ರತೀಯೊಂದು ನಿರ್ಧಾರವೂ ದೇಶವನ್ನು ಉನ್ನತ ಸ್ಥಾನಕ್ಕೇರಿಸುವಲ್ಲಿ ಅಚಲ ಪ್ರಯತ್ನ ಪಡುತ್ತಿದೆ ಎಂಬುದಕ್ಕೆ ಎರಡು ಮಾತಿಲ್ಲ.

Be the first to comment