ಅವಧಿಗಿಂತ ಮುನ್ನವೇ ಟಾರ್ಗೆಟ್ ತಲುಪಲಿದೆ ಕೇಂದ್ರ! 6 ತಿಂಗಳು ಮುಂಚಿತವಾಗಿಯೇ 8 ಕೋಟಿ ಫಲಾನುಭವಿಗಳನ್ನು ಹೊಂದಲಿದೆ ಉಜ್ವಲ ಯೋಜನೆ…

ಮೋದಿ ಸರ್ಕಾರ ದೇಶದಾದ್ಯಂತ ಅದರಲ್ಲೂ ಪ್ರಮುಖವಾಗಿ ಕಟ್ಟಿಗೆಗೆ ಅವಲಂಬಿತವಾಗಿರುವ ಗ್ರಾಮೀಣ ಭಾಗದಲ್ಲಿ ಎಲ್‍ಪಿಜಿ ಬಳಕೆಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತಿದೆ. ಕಟ್ಟಿಗೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುತ್ತಿದೆ. ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ `ಪ್ರಧಾನಮಂತ್ರಿ ಉಜ್ವಲ’ ಯೋಜನೆ ಮಹಿಳೆಯರ ಪಾಲಿಗೆ ನಿಜಕ್ಕೂ ವರದಾನವಾಗಿದೆ. ಹೊಗೆ ಗೂಡುಗಳಲ್ಲಿ ಬೇಯುತ್ತಿದ್ದ ಗ್ರಾಮೀಣ ಮಹಿಳೆಯರಿಗೆ ಮುಕ್ತಿ ಸಿಗುವ ರೀತಿ ಮಾಡಿದೆ ಮೋದಿ ಸರ್ಕಾರ. ಬಡವರಿಗೆ ಉಚಿತವಾಗಿ ಎಲ್‍ಪಿಜಿ ಕಲ್ಪಿಸಲು ಉಜ್ವಲ ಯೋಜನೆಯನ್ನೂ ತಂದಿದೆ. ಇದೀಗ ಟಾರ್ಗೆಟ್‍ಗಿಂತಲೂ ಮುಂಚಿತವಾಗಿ ಎಂಟು ಕೋಟಿ ಫಲಾನುಭವಿಗಳನ್ನು ಹೊಂದಿರುವುದು ಉಜ್ವಲ ಯೋಜನೆ ಎಷ್ಟರ ಮಟ್ಟಿಗೆ ಜನರಲ್ಲಿ ಪರಿಣಾಮಕಾರಿಯಾಗಿದೆ ಎಂಬುವುದು ತಿಳಿಯುತ್ತದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯು ತನ್ನ ಎಂಟು ಕೋಟಿ ಅನಿಲ ಸಂಪರ್ಕದ ಗುರಿಯನ್ನು ಆರು ತಿಂಗಳಿಗೂ ಮುಂಚಿತವಾಗಿ ಅಂದರೆ 2020 ರ ಮಾರ್ಚ್ ತಿಂಗಳಿಗೂ ಮುನ್ನವೇ ತಲುಪಲಿದೆ ಎಂದು ವರದಿಗಳು ಹೇಳುತ್ತಿವೆ. ಈ ಯೋಜನೆಯು ಬಡ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ ಮತ್ತು ಮುಂದಿನ ಹಂತದಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಫಲಾನುಭವಿಗಳನ್ನು ಹೊಂದುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಆಗಸ್ಟ್ 26ರ ವೇಳೆಗೆ ಈ ಯೋಜನೆಯಡಿಯಲ್ಲಿ 7.96 ಕೋಟಿಗೂ ಹೆಚ್ಚು ಸಂಪರ್ಕವನ್ನು ಒದಗಿಸಲಾಗಿದೆ.

ಮೂರು ವರ್ಷಗಳಲ್ಲಿ 5 ಕೋಟಿ ಕುಟುಂಬಗಳಿಗೆ ಅನಿಲ ಸಂಪರ್ಕವನ್ನು ಒದಗಿಸಲಾಗಿದೆ. ಮೂರು ವರ್ಷಗಳಲ್ಲಿ 5 ಕೋಟಿ ಕುಟುಂಬಗಳಿಗೆ ಅನಿಲ ಸಂಪರ್ಕವನ್ನು ವಿತರಿಸುವ ಆರಂಭಿಕ ಗುರಿಯೊಂದಿಗೆ ಉಜ್ವ¯ ಯೋಜನೆಯನ್ನು 2016ರ ಮೇ ತಿಂಗಳಲ್ಲಿ ಪ್ರಾರಂಭಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ 7.96 ಕುಟುಂಬಗಳಿಗೆ ಅಡುಗೆ ಅನಿಲವನ್ನು ಪೂರೈಸಿರುವುದು ಈ ಯೋಜನೆಯ ಹೆಗ್ಗಳಿಕೆಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಪ್ರತೀ ಕುಟುಂಬಕ್ಕೂ ಉಚಿತ ಅನಿಲ ಸಂಪರ್ಕವನ್ನು ಒದಗಿಸುವ ಚಿಂತನೆ ಇದೆ. 8 ಕೋಟಿ ಗುರಿ ತಲುಪಿದ ನಂತರ ಉಜ್ವಲ ಯೋಜನೆಯ ಮೌಲ್ಯಮಾಪನವನ್ನು ಆಧರಿಸಿ ಈ ಕುರಿತು ಘೋಷಣೆ ಮಾಡಲಾಗುವುದು. ಈ ಯೋಜನೆಯಡಿ ಫಲಾನುಭವಿಗಳ ಸಂಖ್ಯೆ ಭವಿಷ್ಯದಲ್ಲಿ ಏರಿಕೆಯಾಗಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಟಾರ್ಗೆಟ್‍ಗಿಂತ 6 ತಿಂಗಳೂ ಮುನ್ನವೇ 8 ಕೋಟಿ ಫಲಾನುಭವಿಗಳನ್ನು ಹೊಂದಲಿರುವ ಉಜ್ವಲ ಯೋಜನೆ ಕೇಂದ್ರ ಸರ್ಕಾರದ ಅತ್ಯಂತ ಯಶಸ್ವಿ ಯೋಜನೆಗಳಲ್ಲಿ ಒಂದಾಗಿದೆ.

ಉರುವಲು ಆಧಾರಿತ ಒಲೆಗಳು ಮಹಿಳೆಯರ ಆಯುಷ್ಯವನ್ನೇ ಮುಕ್ಕುತ್ತಿತ್ತು. ಅವರ ಜೀವನ ಮಟ್ಟವನ್ನೇ ಶಿಥಿಲಗೊಳಿಸುತ್ತಿತ್ತು. ಉಜ್ವಲ ಯೋಜನೆ ಎಲ್ಲೆಡೆ ಪರಿಣಾಮಕಾರಿಯಾಗಿ ಜಾರಿಯಾದರೆ ಇದೊಂದು ದೊಡ್ಡ ಆರೋಗ್ಯ ರಕ್ಷೆ ನೀಡುತ್ತದೆ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಕೇವಲ ಹೆಣ್ಣು ಮಕ್ಕಳಷ್ಟೇ ಅಲ್ಲ, ಇಡೀ ಕುಟುಂಬದ ಜೀವನ ಮಟ್ಟ ಸುಧಾರಣೆಯಲ್ಲೂ ಗಣನೀಯ ಕೊಡುಗೆ ನೀಡಬಲ್ಲದು. ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಸಿಲಿಂಡರ್ ಪೂರೈಕೆಯ ಉದ್ಯೋಗ ಕೂಡ ಉಂಟಾಗುತ್ತದೆ. ಗ್ಯಾಸ್ ಸಂಪರ್ಕ ಕೇವಲ ಶ್ರೀಮಂತರಿಗೆ ಮಾತ್ರ ಎನ್ನುವ ಭಾವನೆ ಹಿಂದೆ ಇತ್ತು. ಆದರೆ, ಇದೀಗ ಕಾಲ ಬದಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಬಡವರಿಗೆ, ಮಹಿಳೆಯರಿಗೆ ಗೌರವ ದೊರಕುತ್ತಿದೆ. ಹೆಚ್ಚಿನ ಬಡ ಕುಟುಂಬಗಳಿಗೆ ಉಚಿತ ಎಲ್.ಪಿ.ಜಿ ಸಂಪರ್ಕ ಕಲ್ಪಿಸಿ ಅದನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯಲಾಗಿದ್ದು ಮೋದಿ ಅವರ ಯೋಜನೆಗಳು ಬಡವರ ಪಾಲಿಗೆ ವರದಾನವಾಗಿದ್ದಂತೂ ಖಂಡಿತ.

Be the first to comment