ಘೋಷಿತ ಉಗ್ರರ ಪಟ್ಟಿಗೆ ಸೇರಿದ ಪಾಕ್ ನ 4 ಭಯೋತ್ಪಾದಕರು! ಭಾರತದ ಈ ನಿರ್ಧಾರಕ್ಕೆ ಅಮೆರಿಕಾ ಪ್ರಶಂಸೆ…

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರವಹಿಸುತ್ತಲೇ ಭಯೋತ್ಪಾದನೆಯನ್ನು ಮಟ್ಟ ಹಾಕಬೇಕೆಂದು ಪಣತೊಟ್ಟವರು… ಅದೇ ರೀತಿ ಇದೀಗ ಮೋದಿ ಸರ್ಕಾರ ಘೋಷಿತ ಉಗ್ರರ ಪಟ್ಟಿಗೆ ಪಾಕಿಸ್ತಾನದ ಉಗ್ರರಾದ ಅಜರ್ ಮೆಹಮೂದ್, ಹಫೀಜ್ ಮೊಹಮ್ಮದ್ ಸಯೀದ್, ಝಾಕಿರ್ ಉರ್ ರೆಹ್ಮಾನ್ ಲಖ್ವಿ, ದಾವೂದ್ ಇಬ್ರಾಹಿಂನನ್ನು ಸೇರ್ಪಡೆಗೊಳಿಸಿದೆ. ಕಾನೂನು ಬಾಹಿರ ಚಟುವಟಿಕೆಗಳನ್ನು ನಿಗ್ರಹಿಸುವ ತಿದ್ದುಪಡಿ ಕಾನೂನಿನ ಅನ್ವಯ, ಈ ನಾಲ್ವರ ಹೆಸರುಗಳನ್ನು ಭಾರತ ಸರ್ಕಾರ ಸೇರ್ಪಡೆ ಮಾಡಿದೆ. ತಿದ್ದುಪಡಿ ಕಾಯ್ದೆ ಜಾರಿಯಾದ ಒಂದು ತಿಂಗಳ ಬಳಿಕ ಭಾರತ ಈ ಮಹತ್ವದ ತೀರ್ಮಾನ ಕೈಗೊಂಡಿದ್ದು ಮೌಲಾನಾ ಮಸೂದ್ ಅಝರ್ ಹಾಗೂ ಹಫೀಜ್ ಮುಹಮ್ಮದ್ ಸಯೀದ್ ನೇರವಾಗಿ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗದಿದ್ದರೂ, ಭಯೋತ್ಪಾದನೆಗೆ ಆರ್ಥಿಕ ಸಹಕಾರ, ತರಬೇತಿ ಹಾಗೂ ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರ ಹೆಸರುಗಳನ್ನು ಕಾಯ್ದೆಯನ್ವಯ ಘೋಷಿತ ಉಗ್ರರ ಪಟ್ಟಿ ಗೆ ಸೇರ್ಪಡೆ ಮಾಡಲಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ಹೇಳಿದೆ.

1967ರ ಮೂಲ ಕಾನೂನಿನಲ್ಲಿ ವೈಯಕ್ತಿಕವಾಗಿ ಯಾರನ್ನೂ ಉಗ್ರರು ಎಂದು ಘೋಷಿಸಲು ಸಾಧ್ಯವಿರಲಿಲ್ಲ. ಗುಂಪು ಅಥವಾ ಸಂಘಟನೆಯನ್ನು ಮಾತ್ರ ಉಗ್ರರೆಂದು ಘೋಷಿಸಬಹುದಿತ್ತು. ಇದೀಗ ಸರ್ಕಾರ ಈ ನಾಲ್ವರನ್ನೂ `ವೈಯಕ್ತಿಕ ಘೋಷಿತ ಉಗ್ರ’ರು ಎಂದು ಘೋಷಿಸಿರುವುದರಿಂದ `ರೆಡ್ ಕಾರ್ನರ್’ ನೊಟೀಸ್ ಹೊರಡಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರರನ್ನು ಈ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತದ ಈ ನಿರ್ಧಾರಕ್ಕೆ ಅಮೆರಿಕಾ ಪ್ರಶಂಸೆ…

ಹೌದು… ಭಾರತದ ದಿಟ್ಟ ಕ್ರಮದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾದ ದಕ್ಷಿಣ ಮತ್ತು ಕೇಂದ್ರೀಯ ಏಷ್ಯಾ ಭಾಗದ ಪ್ರಧಾನ ಸಹಾಯಕ ಕಾರ್ಯದರ್ಶಿ ಆಲಿಸ್ ಜಿ.ವೆಲ್ಸ್ ಅವರು, ಭಾರತದ ನೂತನ ಭಯೋತ್ಪಾದನಾ ತಡೆ ಕಾಯ್ದೆ ಹಾಗೂ ಪಟ್ಟಿಯಲ್ಲಿ ನಾಲ್ವರು ಉಗ್ರರ ಸೇರ್ಪಡೆಗೊಳಿಸಿರುವುದನ್ನು ಅಮೆರಿಕಾ ಬೆಂಬಲಿಸುತ್ತದೆ ಹಾಗೂ ಅದನ್ನು ಪ್ರಶಂಸಿಸುತ್ತದೆ. ಭಾರತದ ಈ ಹೊಸ ಕಾನೂನು ಉಗ್ರರನ್ನು ಮಟ್ಟಹಾಕಲು ಭಾರತ ಹಾಗೂ ಅಮೆರಿಕಾ ನಡೆಸುತ್ತಿರುವ ಜಂಟಿ ಕಾರ್ಯಾಚರಣೆಗೆ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ. ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಅಜರ್ ಮೆಹಮೂದ್, ಜಮಾದ್-ಉದ್-ದವಾ ಸಂಸ್ಥಾಪಕ ಹಫೀಜ್ ಮೊಹಮ್ಮದ್ ಸಯೀದ್, ಲಷ್ಕರ್ ಕಮಾಂಡರ್ ಝಾಕಿರ್-ಉರ್-ರೆಹ್ಮಾನ್ ಲಖ್ವಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ನೂತನ ಭಯೋತ್ಪಾದನಾ ತಡೆ ಕಾಯ್ದೆ ಅನ್ವಯ ವ್ಯಕ್ತಿಗತ ಉಗ್ರರು ಎಂದು ಕೇಂದ್ರ ಸರ್ಕಾರ ನಿನ್ನೆಯಷ್ಟೇ ಘೋಷಣೆ ಮಾಡಿತ್ತು. ಕಳೆದ ತಿಂಗಳು ಸಂಸತ್ತಿನಲ್ಲಿ ಅನುಮೋದನೆಗೊಂಡ ಕಾನೂನು ಬಾಹಿರ ಚಟುವಟಿಕೆಗಳ ತಿದ್ದುಪಡಿ ಕಾಯ್ದೆಯನ್ವಯ ಕೇಂದ್ರ ಗೃಹ ಇಲಾಖೆ ಮೊದಲ ಬಾರಿಗೆ ವ್ಯಕ್ತಿಗತ ಉಗ್ರರ ಪಟ್ಟಿಯನ್ನು ಘೋಷಣೆ ಮಾಡಿದೆ.

Be the first to comment