ಪ್ರಧಾನಿ ಮೋದಿ ಜೊತೆ ಕುಳಿತು ಚಂದ್ರಯಾನ-2 ಐತಿಹಾಸಿಕ ಕ್ಷಣವನ್ನು ವೀಕ್ಷಣೆ ಮಾಡಲಿದ್ದಾರೆ 60 ಮಕ್ಕಳು…

ಜುಲೈ 22 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಉಪಗ್ರಹ ಉಡಾವಣಾ ನೆಲೆಯಿಂದ ಚಂದ್ರಯಾನ-2 ಉಪಗ್ರಹವನ್ನು ಜಿಎಸ್‍ಎಲ್‍ವಿ ಮಾರ್ಕ್ 3 ಉಡಾಹಕದ ಮೂಲಕ ಉಡಾವಣೆ ಮಾಡಲಾಗಿತ್ತು. ಮೊದಲಿಗೆ ಉಪಗ್ರಹವನ್ನು ಭೂ ಕಕ್ಷೆಯಲ್ಲಿರಿಸಿ, ಹಂತ ಹಂತರವಾಗಿ ಕಕ್ಷೆಯನ್ನು ಎತ್ತರಿಸಿ, ಚಂದ್ರನ ಕಕ್ಷೆಗೆ ರವಾನಿಸಲಾಗಿದೆ. ಚಂದ್ರನ ಸಮಗ್ರ ಅಧ್ಯಯನದ ಎರಡನೇ ಪ್ರಯತ್ನ ನಡೆಸಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ-2 ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಚಂದ್ರಯಾನ-2 ಗಗನನೌಕೆ ಇಂದು ಮಧ್ಯರಾತ್ರಿ ದಕ್ಷಿಣ ಧೃವಕ್ಕೆ ಇಳಿಯುವ ಐತಿಹಾಸಿಕ ಕ್ಷಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಕ್ಷಣ ಸಾಕಾರವಾದರೆ, ಚಂದ್ರನ ಮೇಲೆ ಸುರಕ್ಷಿತ ಲ್ಯಾಂಡ್ ಆದ ವಿಶ್ವದ ನಾಲ್ಕನೇ ದೇಶ ಎಂಬುದರ ಜತೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆದ ಹಾಗೂ ಮೊದಲ ಪ್ರಯತ್ನದಲ್ಲೇ ಚಂದ್ರಯಾನ ಯಶಸ್ವಿಗೊಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗಳಿಗೆ ಭಾರತ ಪಾತ್ರವಾಗಲಿದೆ.

ಈ ಐತಿಹಾಸಿಕ ಕ್ಷಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೊತೆಗೆ, ಆನ್ ಲೈನ್ ರಸಪ್ರಶ್ನೆಯಲ್ಲಿ ಆಯ್ಕೆಯಾದ ದೇಶದ 60 ವಿದ್ಯಾರ್ಥಿಗಳ ಜೊತೆ ಗೂಡಿ ಇಸ್ರೋ ನಡೆಸಿರುವ ಚಂದ್ರಯಾನ-2 ಸಾಧನೆಯನ್ನು ವೀಕ್ಷಣೆ ಮಾಡಲಿದ್ದಾರೆ. ಚಂದ್ರಯಾನ-2 ನೌಕೆ ಚಂದಿರನ ಮೇಲೆ ಇಂದು ತಡರಾತ್ರಿ 1.30ರಿಂದ 2.30ರ ವೇಳೆಗೆ ಪಾದಾರ್ಪಣೆ ಮಾಡಲಿದೆ. ಈ ಅಪರೂಪದ ಕ್ಷಣವನ್ನು ಇಡೀ ವಿಶ್ವವೇ ಎದಿರು ನೋಡುತ್ತಿದೆ. ಲ್ಯಾಂಡರ್ ನೌಕೆ ಚಂದ್ರನಲ್ಲಿ ಇಳಿದ ನಂತರ, ಶನಿವಾರ ಮುಂಜಾನೆ 5-30ರಿಂದ 6-30ರ ಸಮಯದಲ್ಲಿ ವಿಕ್ರಮ್ ನಲ್ಲಿರುವ ಪ್ರಜ್ಞಾನ್ ರೋವರ್ ಚಂದ್ರನ ಮೇಲೆ ಇಳಿಯಲಿದೆ. ಪ್ರಜ್ಞಾನ್ ರೋವರ್ ಚಂದ್ರನ ಮೇಲೆ ಚಲಿಸಿ ದತ್ತಾಂಶ ಸಂಗ್ರಹಿಸಲಿದೆ. ಚಂದ್ರಯಾನ-2 ಯೋಜನೆಯಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ನೌಕೆಯನ್ನು ಇಳಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಚಂದ್ರಯಾನ -2 ನೌಕೆಯು ವಿಕ್ರಮ್ ಲ್ಯಾಂಡ್ ಆಗಲು ಸಹಕರಿಸುವ ನಿಟ್ಟಿನಲ್ಲಿ ಸುಮಾರು 8 ಉಪಕರಣಗಳನ್ನು ಹೊತ್ತೊಯ್ದಿದೆ. ವಿಕ್ರಮ್ ಚಂದ್ರನ ದಕ್ಷಿಣ ಧ್ರುವದಲ್ಲಿ 70ಡಿಗ್ರಿ ದಕ್ಷಿಣ ಅಕ್ಷಾಂಶದಲ್ಲಿನ ಎರಡು ಕುಳಿಗಳ ನಡುವೆ ಇಳಿಯಲಿದೆ. ಇಂದು ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯಿತೆಂದರೆ, ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳ ಪರಿಶ್ರಮ ಸಾರ್ಥಕವಾಗಲಿದೆ. ಅಲ್ಲದೆ ಹೊಸ ಇತಿಹಾಸ ರಚನೆಯಾಗಲಿದೆ.

Be the first to comment