ಪ್ಲಾಸ್ಟಿಕ್ ಬಳಕೆಗೆ ಇಡೀ ವಿಶ್ವ ವಿದಾಯ ಹೇಳಬೇಕೆಂದು ಮನವಿ ಮಾಡಿಕೊಂಡ ಪ್ರಧಾನಿ ಮೋದಿ…

ಪ್ಲಾಸ್ಟಿಕ್ ಮುಕ್ತ ಭಾರತದ ಗುರಿ. ಏನೇ ಖರೀದಿಸಲೂ ಹೋದರೂ ಬಟ್ಟೆ ಚೀಲ ಕೊಂಡೊಯ್ಯಿರಿ. ಒಂದು ಸಣ್ಣ ನಿರ್ಧಾರದಿಂದ ದೊಡ್ಡ ಬದಲಾವಣೆ ಸಾಧ್ಯ. ಎಲ್ಲಾ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಸಬೇಡಿ ಎಂದು ಬೋರ್ಡ್ ಹಾಕಿ. ಪ್ಲಾಸ್ಟಿಕ್ ನಿರ್ಮೂಲನೆಗೆ ಜನಸಾಮಾನ್ಯರು ಪಣ ತೊಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಎಲ್ಲಾ ಭಾರತೀಯರಿಗೆ ಕರೆ ಕೊಟ್ಟಿದ್ದರು. ಅದೇ ರೀತಿ ಗ್ರೇಟರ್ ನೋಯ್ಡಾದಲ್ಲಿ ನಿನ್ನೆ ನಡೆದ ವಿಶ್ವಸಂಸ್ಥೆಯ ಪರಿಸರ ರಕ್ಷಣಾ ಸಮಾವೇಶದಲ್ಲೂ ಮೋದಿ ಪ್ಲಾಸ್ಟಿಕ್ ಮುಕ್ತ ವಿಶ್ವಕ್ಕೆ ಕರೆ ನೀಡಿದ್ದಾರೆ.

ಹೌದು… ಗ್ರೇಟರ್ ನೊಯ್ಡಾದಲ್ಲಿ ನಿನ್ನೆ ನಡೆದ ಯುಎನ್‍ಸಿಸಿಡಿ-ವಿಶ್ವಸಂಸ್ಥೆಯ ಪರಿಸರ ರಕ್ಷಣಾ ಸಮಾವೇಶ ಸಿಒಪಿ14 ಸಮಾವೇಶದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪ್ಲಾಸ್ಟಿಕ್ ಮುಕ್ತ ವಿಶ್ವಕ್ಕೆ ಕರೆ ನೀಡಿದ್ದಾರೆ. ಮುಂಬರುವ ಗಾಂಧಿ ಜಯಂತಿಯಂದು ದೇಶಾದ್ಯಂತ ಮರು ಬಳಕೆಯಾಗದ ಪ್ಲಾಸ್ಟಿಕ್ ನಿಷೇಧಿಸುವ ನಿರ್ಧಾರ ಪ್ರಕಟಿಸಿರುವ ಭಾರತ, ವಿಶ್ವರಾಷ್ಟ್ರಗಳೂ ಕೂಡ ಇದೇ ನಿಯಮ ಪಾಲಿಸಬೇಕೆಂಬ ಹಕ್ಕೊತ್ತಾಯ ಮಂಡಿಸಿದೆ. ಜತೆಗೆ ಹವಾಮಾನ ವೈಪರೀತ್ಯ ಮತ್ತು ಭೂ ಅವನತಿ ತಡೆಗೆ ಗ್ಲೋಬಲ್ ವಾಟರ್ ಅಜೆಂಡಾ ರೂಪಿಸುವ ಸಲಹೆ ಮುಂದಿಟ್ಟಿದ್ದಾರೆ. ಪರಿಸರಕ್ಕೆ ಹಾನಿಯುಂಟುಮಾಡುವ ಏಕಬಳಕೆ ಪ್ಲಾಸ್ಟಿಕ್‍ನಿಂದ ಭಾರತವನ್ನು ಮುಕ್ತಗೊಳಿಸಲು ನಿರ್ಧರಿಸಲಾಗಿದೆ. ಹೀಗಾಗಿ ಇತರ ರಾಷ್ಟ್ರಗಳೂ ಪ್ಲಾಸ್ಟಿಕ್ ಬಳಕೆಗೆ ಗುಡ್‍ಬೈ ಹೇಳಿದರೆ ಪರಿಸರ ಹಾನಿ ತಡೆಯಬಹುದಾಗಿದೆ ಎಂದರು.

ಸಮುದ್ರದ ನೀರಿನ ಮಟ್ಟ ವೃದ್ಧಿ, ಅನಿಯಮಿತ ಮಳೆ, ಚಂಡ ಮಾರುತಗಳು ಹವಾಮಾನ ವೈಪರೀತ್ಯದ ಪ್ರಭಾವಗಳೇ ಕಾರಣ ಎಂದು ಮೋದಿ ಆತಂಕ ವ್ಯಕ್ತಪಡಿಸಿದರು. ಅಕ್ಟೋಬರ್ 2ರಿಂದ 6 ಬಗೆಯ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಉಪಯೋಗ ನಿಷೇಧ ಗೊಳ್ಳಲಿವೆ. ಇದರಲ್ಲಿ ಪ್ಲಾಸ್ಟಿಕ್ ಬ್ಯಾಗ್ಸ್, ಕಪ್‍ಗಳು, ಬಟ್ಟಲು, ಸಣ್ಣ ಬಾಟಲಿ, ಸ್ಟ್ರಾ ಮತ್ತು ಕೆಲ ಪ್ರಕಾರದ ಸ್ಯಾಚೆಟ್ಸ್‍ಗಳು ಸೇರಿವೆ. ಈ ನಿಷೇಧದಿಂದ ಭಾರತದ ವಾರ್ಷಿಕ ಪ್ಲಾಸ್ಟಿಕ್ ಬಳಕೆ ಪ್ರಮಾಣ 14 ಮಿಲಿಯನ್ ಟನ್ ಇಳಿಕೆಯಾಗಲಿದೆ. ಇದು ಒಟ್ಟು ಬಳಕೆ ಪ್ರಮಾಣದ ಶೇಕಡಾ 5 ಎಂದು ಮೋದಿ ಹೇಳಿದ್ದಾರೆ.

ಅಲ್ಲದೆ ಹವಾಮಾನ ಬದಲಾವಣೆಯು ಭೂ ಕುಸಿತಕ್ಕೆ ಕಾರಣವಾಗಿದೆ. ಅನುತ್ಪಾದಕರ ಭೂಮಿಯನ್ನು ಪುನಶ್ಚೇತನಗೊಳಿಸುವ ಸಂದರ್ಭದಲ್ಲೇ ನೀರಿನ ಕೊರತೆಯನ್ನು ಕೂಡಾ ಪರಿಹರಿಸಲಾಗುವುದು ನೀರಿನ ಪುನರ್ಭರ್ತಿಯ ವರ್ಧನೆ, ನೀರಿನ ಹರಿವನ್ನು ನಿಧಾನಗೊಳಿಸುವುದು, ಮಣ್ಣಿನಲ್ಲಿ ತೇವಾಂಶವನ್ನು ಉಳಿಸಿಕೊಳ್ಳುವುದು ಮತ್ತು ಸಮಗ್ರ ಭೂ ತಂತ್ರದ ಎಲ್ಲಾ ಭಾಗಗಳು ಈ ಯೋಜನೆಯ ಅಂಶಗಳಾಗಿವೆ ಎಂದು ಮೋದಿ ಹೇಳಿದರು. ಉತ್ಪಾದನಾ ಸಾಮಥ್ರ್ಯ ಕಳೆದುಕೊಂಡಿರುವ 21 ರಿಂದ 26 ಹೆಕ್ಟೇರ್ ಭೂಮಿಯನ್ನು 2030 ರೊಳಗೆ ಫಲದಾಯಕವಾಗುವಂತೆ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಿದರು. ಅಲ್ಲದೆ ತಮ್ಮ ಭಾಷಣದ ಕೊನೆಯಲ್ಲಿ ಶಾಂತಿ ಮಂತ್ರವನ್ನು ಉಲ್ಲೇಖಿಸಿದ ಮೋದಿ, “ಆಕಾಶ, ಭೂಮಿ, ನೀರಿಗಾಗಿ ಪ್ರಾರ್ಥಿಸಿ, ಇವುಗಳು ಸಮೃದ್ಧಿಯಾಗಿದ್ದರೆ ನಾವು ಏಳಿಗೆ ಹೊಂದುತ್ತೇವೆ ಎಂದರು. ಖಂಡಿತವಾಗಿಯೂ ಇದಕ್ಕೆ ಇಡೀ ದೇಶದ ಜನತೆ ಪ್ಲಾಸ್ಟಿಕ್ ಉಪಯೋಗ ಮಾಡದಂತೆ ಸಹಕಾರ ನೀಡಿದರೆ ಪರಿಸರ ಹಾನಿಯನ್ನು ತಡೆಯಬಹುದು.

Be the first to comment