ಯಾವ ಪಕ್ಷಗಳಿಗೂ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಬೇಡ, ಹರ್ಯಾಣದಲ್ಲಿ ಬಿಎಸ್ಪಿ ಏಕಾಂಗಿ ಸ್ಪರ್ಧೆ

ಕಳೆದ ಎರಡು ಲೋಕಸಭೆ ಚುನಾವಣೆಯಲ್ಲಿ ಉಂಟಾದ ಹೀನಾಯ ಸೋಲು, ಹಲವು ವಿಧಾನಸಭೆ ಚುನಾವಣೆಗಳಲ್ಲಿ ಆದ ಹಿನ್ನಡೆ, ಸಮರ್ಥ ನಾಯಕತ್ವದ ಕೊರತೆ, ಪಕ್ಷದಲ್ಲೇ ಉಂಟಾದ ಭಿನ್ನಾಭಿಪ್ರಾಯ, ಹುದ್ದೆಗಾಗಿ ಉಂಟಾದ ಬಿಕ್ಕಟ್ಟು, ಒಳಮುನಿಸಿನಿಂದಾಗಿ ಕಾಂಗ್ರೆಸ್ ಇಂದು ಯಾರಿಗೂ ಬೇಡವಾದ ಪಕ್ಷವಾಗಿದೆ. ಅದರಲ್ಲೂ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆಯಲಿ, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಹಲವು ಪಕ್ಷಗಳು ಹಿಂದಡಿ ಇಡುತ್ತಿವೆ. ನಿರಾಕರಿಸುತ್ತಿವೆ.
ಇದಕ್ಕೆ ನಿದರ್ಶನ ಎಂಬಂತೆ ಹರ್ಯಾಣದ ಎಲ್ಲ 90 ಕ್ಷೇತ್ರಗಳಲ್ಲಿ ಬಿಎಸ್‌ಪಿಯು ಏಕಾಂಗಿಯಾಗಿ ಸ್ಪರ್ಧಿಸಲಿದೆ. ಕಾಂಗ್ರೆಸ್‌ ಸೇರಿದಂತೆ ಯಾರೊಂದಿಗೂ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕ ಸತೀಶ್‌ ಚಂದ್ರ ಮಿಶ್ರಾ ತಿಳಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಹರ್ಯಾಣದ ನೂತನ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಭೂಪಿಂದರ್‌ ಸಿಂಗ್‌ ಹೂಡಾ ಹಾಗೂ ಹರಿಯಾಣ ಕಾಂಗ್ರೆಸ್‌ ಮುಖ್ಯಸ್ಥೆ ಕುಮಾರಿ ಶೆಲ್ಜಾ ಭಾನುವಾರ ರಾತ್ರಿ ಲಖನೌದಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರನ್ನು ಭೇಟಿ ಮಾಡಿದ್ದರು ಎಂಬ ವರದಿಗಳ ಹಿನ್ನಲೆಯಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ? ಬಿಎಸ್ಪಿ ಮೈತ್ರಿ ಕುರಿತು ವದಂತಿಗಳು ಹಬ್ಬಿದ್ದವು. ಹಾಗಾಗಿ ಮಿಶ್ರಾ ಈ ಸ್ಪಷ್ಟನೆ ನೀಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮಾಯಾವತಿ ಸೀಟು ಹಂಚಿಕೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಜನ ನಾಯಕ್‌ ಜನತಾ ಪಕ್ಷದ ಜೊತೆಗಿನ ಮೈತ್ರಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು. ಹಾಗೆಯೇ, ಹರಿಯಾಣದಲ್ಲಿ ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿಯೂ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡರು ಮಾಯಾವತಿಯವರನ್ನು ಭೇಟಿ ಮಾಡಿದ್ದರು ಎಂದು ಹೇಳಲಾಗಿತ್ತು.
ಆದರೆ, ಹಿರಿಯ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಪಕ್ಷದ ನಾಯಕರು, ಮಾಯಾವತಿ ಜೊತೆ ಭೇಟಿ ನಡೆಸಿರುವ ಸುದ್ದಿಯನ್ನು ತಳ್ಳಿಹಾಕಿದ್ದರು. ಬಿಎಸ್ಪಿ ಜೊತೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿಯೇ ಕಣಕ್ಕಿಳಿಯುತ್ತದೆ ಎಂದು ಆಜಾದ್‌ ಸ್ಪಷ್ಟಪಡಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯ ವೇಳೆ, ಉತ್ತರ ಪ್ರದೇಶದಲ್ಲಿ ಬಿಎಸ್ಪಿ ನೇತೃತ್ವದ ಮಹಾಘಟಬಂಧನ್‌ ಮೈತ್ರಿಕೂಟಕ್ಕೆ ಸೇರಲು ಕಾಂಗ್ರೆಸ್‌ ಪಕ್ಷ ಬಹಳ ಆಸಕ್ತವಾಗಿತ್ತು. ಆದರೆ, ಕಾಂಗ್ರೆಸ್‌ ಸೇರ್ಪಡೆಯಿಂದ ತಮ್ಮ ಮೈತ್ರಿಕೂಟಕ್ಕೆ ಲಾಭವಾಗುವುದಿಲ್ಲ ಎಂಬ ಕಾರಣ ನೀಡಿ ಕಾಂಗ್ರೆಸ್‌ ಪ್ರಸ್ತಾಪವನ್ನು ಮಾಯಾವತಿ ಮತ್ತು ಅಖಿಲೇಶ್‌ ಯಾದವ್‌ ತಿರಸ್ಕರಿಸಿದ್ದರು. ಅಂತಿಮವಾಗಿ, ಉತ್ತರ ಪ್ರದೇಶದ ಲೋಕಸಭಾ ಚುನಾವಣೆಯಲ್ಲಿ ಮಹಾಘಟಬಂದನ್‌ ಹೀನಾಯವಾಗಿ ಸೋಲಪ್ಪಿತು. 2014 ಚುನಾವಣೆಯಲ್ಲಿ ತನ್ನ ಗೆಲುವಿನ ಸಾಧನೆಯನ್ನು 2019ರ ಚುನಾವಣೆಯಲ್ಲೂ ಬಿಜೆಪಿ ಮುಂದುವರಿಸಿತ್ತು.

ಇನ್ನು, 90 ಸದಸ್ಯಬಲ ಇರುವ ಹರಿಯಾಣದಲ್ಲಿ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟ ಅಧಿಕಾರದಲ್ಲಿದೆ. ಎನ್‌ ಡಿ ಎ 47 ಸ್ಥಾನಗಳನ್ನು ಗೆದ್ದಿದೆ. ಅಭಯ್‌ ಸಿಂಗ್‌ ಚೌತಾಲ ನೇತೃತ್ವದ ಐಎನ್‌ಎಲ್‌ ಡಿ 18 ಹಾಗೂ ಕಾಂಗ್ರೆಸ್‌ 17 ಸ್ಥಾನಗಳಲ್ಲಿ ಗೆದ್ದಿದ್ದವು. ಬಿಎಸ್ಪಿ ಒಂದೂ ಸೀಟು ಗೆಲ್ಲದಿದ್ದರೂ ಹರಿಯಾಣದ ಹಲವು ಕಡೆ ಪ್ರಭಾವಹೊಂದಿದೆ ಕಾಂಗ್ರೆಸ್‌ ಮತ್ತು ಬಿಎಸ್ಪಿ ಒಟ್ಟುಗೂಡಿದರೆ ಜಾಟ್‌ ಮತ್ತು ಜಾಟವ್‌ ಸಮುದಾಯದ ಮತಗಳನ್ನು ಸೆಳೆಯಬಹುದು ಎಂಬುದು ಲೆಕ್ಕಾಚಾರವಾಗಿದೆ.

Be the first to comment