ಹಿಂದೂಗಳ ಆರಾಧ್ಯ ದೇವರನ್ನು ಪಾಪಿ ಪಾಕಿಸ್ತಾನದಲ್ಲೂ ಪೂಜಿಸುತ್ತಾರಾ?! ಪೌರಾಣಿಕ ಹಿನ್ನಲೆಯಿಂದ ಕೂಡಿದ ಈ ದೇವಾಲಯ ಪಾಕಿಸ್ತಾನ ಆಕ್ರಮಿತ ಬಲೂಚಿಸ್ಥಾನದಲ್ಲೇಕಿದೆ?!

ಹಿಂದೂ ಧರ್ಮ ಇಡೀ ಜಗತ್ತಿನಾದ್ಯಂತ ಪಸರಿಸಿರುವುದಕ್ಕೆ ಈಗಾಗಲೇ ಹಲವಾರು ಸಾಕ್ಷ್ಯಗಳ ರೂಪದಲ್ಲಿ ದೊರಕುತ್ತಿದೆ… ಇಂದು ಹಿಂದೂ ಧರ್ಮದ ಆಲೋಚನೆಗಳಿಗೆ ವಿರುದ್ಧವಾಗಿರುವ ಒಂದು ಭೂಮಿ ಹಿಂದೂಗಳ ಆರಾಧ್ಯ ದೇವರನ್ನು ಪೂಜಿಸುತ್ತಿದೆ!! ನಮ್ಮ ಭಾರತೀಯರನ್ನು ಸುಖಾ ಸುಮ್ಮನೆ ಕೆರಳಿಸುವುದಕ್ಕೆ ಈ ಭೂಮಿಯೇ ಕಾರಣ. ಅದಲ್ಲದೆ ಶಾಂತಿ ಮತ್ತು ಸಾಮರಸ್ಯದಲ್ಲಿ ನಂಬಿಕೆ ಇರದ ಭೂಮಿ ಇದು.. ಈಗಾಗಲೇ ನಿಮಗೆ ತಿಳಿದಿರಬಹುದಲ್ಲವೆ ನಾವು ಯಾವ ದೇಶದ ಬಗ್ಗೆ ಹೇಳುತ್ತಿದ್ದೇವೆ ಎಂದು. ಹೌದು.. ನಮಗೆ ಶತ್ರು ದೇಶವೆಂದರೆ ಅದು ಪಾಪಿ ರಾಷ್ಟ್ರ ಪಾಕಿಸ್ತಾನ!! ಭಾರತ ಎಂದು ಹೆಸರು ಕೇಳಿದರೇ ಉರಿದು ಬೀಳುವ ಪಾಕಿಸ್ತಾನಿಯರು ಅದೇ ಹಿಂದೂಗಳು ಪೂಜಿಸುವ ದೇವರನ್ನು ಪೂಜಿಸುತ್ತಾರೆ. ಅದಲ್ಲದೆ ಅಲ್ಲಿರುವ ಅನೇಕ ಹಿಂದೂ ದೇವಾಲಯಗಳನ್ನು ಸಂರಕ್ಷಣೆ ಕೂಡಾ ಮಾಡುತ್ತಿದ್ದಾರೆ. ಪಾಕಿಸ್ತಾನವನ್ನು ಮುಸ್ಲಿಂ ರಾಷ್ಟ್ರವೆಂದು ಪರಿಗಣಿಸಿದರೂ ಕೂಡಾ ಅಲ್ಲಿ ಹಿಂದೂ ದೇವಾಲಯಗಳನ್ನು ಇಂದಿಗೂ ಸಂರಕ್ಷಿಸುತ್ತಾ ಬಂದಿದ್ದಾರೆ ಎಂದರೆ ನಿಜವಾಗಿಯೂ ಅಚ್ಚರಿಯಾಗುತ್ತದೆಯಲ್ಲವೇ!

ಪಾಪಿ ಪಾಕಿಸ್ತಾನದಲ್ಲೂ ಹಿಂದೂಗಳ ಆರಾಧ್ಯದೇವರ ಆರಾಧನೆ!!

ಪಾಕಿಸ್ತಾನವನ್ನು ಜಗತ್ತಿನ ಮುಸ್ಲಿಂ ರಾಷ್ಟ್ರವೆಂದು ಪರಿಗಣಿಸಲಾಗಿದೆಯಾದರೂ, ಅದು ವಿಭಜನೆಯ ನಂತರ ಇನ್ನೂ ಅಸ್ತಿತ್ವದಲ್ಲಿರುವ ಅನೇಕ ಹಿಂದೂ ದೇವಾಲಯಗಳನ್ನು ಹೊಂದಿದೆ ಎಂದು ಅನೇಕ ಜನರಿಗೆ ತಿಳಿದಿರಲು ಸಾಧ್ಯವಿಲ್ಲ.. ಅದರಲ್ಲೂ ಪಾಕಿಸ್ತಾನದಲ್ಲಿರುವ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಈ ಅದ್ಭುತ ಗುಹೆ ದೇವಸ್ಥಾನವೂ ಬಲೂಚಿಸ್ಥಾನ್ ಪ್ರಾಂತ್ಯದ ಹಿಂಗೂಲ್ ನದಿಯ ತೀರದಲ್ಲಿದೆ. ಹಿಂದುಲಾ ದೇವಿ, ಹಿಂಗ್ಲಾಜ್ ದೇವಿ ಮತ್ತು ನಾನಿ ಮಂದಿರ ಮುಂತಾದ ಅನೇಕ ಹೆಸರುಗಳಿಂದ ಹಿಂದೂಗಳು ಈ ದೇವಲಾಯವನ್ನು ಕರೆಯುತ್ತಾರೆ… ಮುಸ್ಲಿಮರು ಇದನ್ನು ನಾನಿಕಾ ಮಂದಿರ ಎಂದು ಕರೆಯುತ್ತಿದ್ದು ಪಾಕಿಸ್ತಾನದಲ್ಲಿ ಮುಸ್ಲಿಮರೂ ಇದನ್ನು ಪೂಜಿಸುತ್ತಾರೆ ಎಂದರೆ ನಂಬಲು ಸಾಧ್ಯವೆ ?! ನಂಬಲೇ ಬೇಕಾದ ಸತ್ಯ ಇದು.. ಪಾಕಿಸ್ತಾನದಲ್ಲಿರುವ ಈ ದೇವಾಲಯವು ವಿಶ್ವದಾದ್ಯಂತದ ಅನೇಕ ಭಕ್ತರ ಗಮನವನ್ನು ಸೆಳೆಯುತ್ತಿದೆಯಲ್ಲದೆ ಈ ದೇವಾಲಯಗಳ ಕುತೂಹಲಕಾರಿ ವಿಷಯವೆಂದರೆ ಮುಸ್ಲಿಮರು ಈ ದೇವಾಲಯಕ್ಕೆ ಬಂದು ಈ ದೇವರನ್ನು ಪೂಜಿಸುತ್ತಾರೆ..

ಹಿಂಗ್ಲಾಜ್ ದೇವಿಯನ್ನು, ಹಿಂಗ್ಲಾಜ್ ಮಾತಾ, ಹಿಂಗುಳಾ ದೇವಿ ಮತ್ತು ನಾನಿ ಮಂದಿರ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಹಿಂಗ್ಲಾಜ್ ದೇವಸ್ಥಾನವು ಪಾಕಿಸ್ತಾನದ, ಬಲೂಚಿಸ್ಥಾನ ರಾಜ್ಯದ ಲಸ್ಬೆಲ ಜಿಲ್ಲೆಯ ಹಿಂಗ್ಲಾಜ್ ಎಂಬ ಪ್ರಾಂತ್ಯದಲ್ಲಿದೆ. ಈ ದೇವಾಲಯ ಹಿಂಗೋಳ ನದಿಯ ತೀರದಲ್ಲಿ ಒಂದು ಬೆಟ್ಟದ ಗುಹೆಯಲ್ಲಿ ದುರ್ಗೆಯ ಅಥವ ದೇವಿಯ ರೂಪದಲ್ಲಿದೆ. ಹಿಂಗ್ಲಾಜ್ ದೇವಿಯ ದೇಗುಲ 51 ಶಕ್ತಿಪೀಠಗಳಲ್ಲಿ ಒಂದು. ಹಿಂಗ್ಲಾಜ್ ದೇವಿಯು ಭಾರತದಲ್ಲಿಯೇ ಹಲವಾರು ಕ್ಷತ್ರಿಯರ ಹಾಗು ಇತರ ಸಮುದಾಯಗಳ ಕುಲದೇವತೆಯಾಗಿದ್ದು ಈ ದೇವಾಲಯ ಹಿಂದೆ ಅನೇಕ ಪೌರಾಣಿಕ ಕತೆಗಳೂ ಅಡಕವಾಗಿದೆ..

ಈ ದೇವಾಲಯದ ಹಿಂದೆ ಅಡಗಿದೆ ಪೌರಾಣಿಕ ಹಿನ್ನಲೆ!!

ಭಾರತದ ಶಕ್ತಿ ಪೀಠವೆಂದು ಕರೆಸಿಕೊಳ್ಳುವ “ಸತಿಯ ಪೀಠ” ಶಿವನ ಪತ್ನಿ, ದಕ್ಷಪುತ್ರಿ ದಾಕ್ಷಾಯಣಿಯ ದೇಹದ ಭಾಗಗಳಿಂದ ಉಂಟಾಗಿದ್ದೆಂದು ಪುರಾಣಗಳು ಉಲ್ಲೇಖಿಸುತ್ತವೆ. ತನ್ನ ತಂದೆ ದಕ್ಷ ಪ್ರಜಾಪತಿ ತನ್ನ ಗಂಡ ಶಿವನನ್ನು ಯಜ್ಞಕ್ಕೆ ಆಹ್ವಾನಿಸದೆ ಅಪಮಾನ ಮಾಡಿದ್ದಕ್ಕಾಗಿ ಕುಪಿತಗೊಂಡ ಸತಿ, ಯಜ್ಞ ಕುಂಡಕ್ಕೆ ಹಾರಿ ಪ್ರಾಣ ಬಿಡುತ್ತಾಳೆ. ವಿಷಯ ತಿಳಿದ ಶಿವ ಕೋಪದಿಂದ ಕೆಂಡಾಮಂಡಲನಾಗಿ ಯಜ್ಞ ನಡೆಯುವಲ್ಲಿಗೆ ಬಂದು ಸತಿಯ ದೇಹವನ್ನು ಅಗ್ನಿಯಿಂದೆತ್ತಿ ತಾಂಡವವಾಡಲು ತೊಡಗುತ್ತಾನೆ. ಪ್ರಳಯದ ಭೀತಿಯನ್ನು ಮನಗಂಡ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು 51 ತುಂಡುಗಳಾಗಿ ಕತ್ತರಿಸಿದಾಗ ಅದು ಭಾರತದ 51 ಭಾಗಗಳಲ್ಲಿ ಹೋಗಿ ಬೀಳುತ್ತದೆ. ಸತಿಯ ಅಂಗಾಗಳು ಬಿದ್ದ ಜಾಗಗಳೆಲ್ಲವೂ “ಶಕ್ತಿ ಪೀಠ”ಗಳಾಗುತ್ತವೆ.

51 ಪೀಠಗಳಲ್ಲಿ ಉಳಿದೆಲ್ಲ ಶಕ್ತಿ ಪೀಠಗಳು ಭಾರತದಲ್ಲೆ ಇದ್ದರೂ ಒಂದು ಪೀಠ ಮಾತ್ರ ಈಗ ಪಾಕಿಸ್ತಾನ ಆಕ್ರಮಿತ ಬಲೋಚಿಸ್ಥಾನದಲ್ಲಿದೆ. ಸತಿಯ ದೇಹದ ಮೊದಲ ಅಂಗ ಶಿರ ಈ ಜಾಗದಲ್ಲಿ ಬಿದ್ದಿದ್ದರಿಂದ ಸನಾತನ ಸಂಸ್ಕೃತಿಯಲ್ಲಿ ಈ ಪೀಠಕ್ಕೆ ಬಹು ಮಾನ್ಯತೆ ಇದೆ. 51 ಪೀಠಗಳಲ್ಲಿ ಇದು ಮೊದಲನೆಯ ಪೀಠ ಎನ್ನಲಾಗುತ್ತದೆ. ಬಲೋಚಿಸ್ತಾನದ ಹಿಂದೂಗಳು ಪೀಠವನ್ನು ತಾಯಿ ಹಿಂಗಳಾದೇವಿ ಎಂದು ಪೂಜಿಸಿದರೆ ಮುಸ್ಲಿಮರು ನಾನಿ ಮಂದಿರ ಅಥವಾ ಬೀಬಿ ನಾನಿ ಮಂದಿರವೆಂದು ಪೂಜಿಸುತ್ತಾರೆ. ಹಿಂದೂಗಳಂತೆಯೆ ಹೂವು-ಹಣ್ಣು-ಧೂಪ- ಕೆಂಪು ಚಾದರ ಅರ್ಪಿಸಿ ದೇವಿಯ ಆರಾಧನೆ ಮಾಡುತ್ತಾರೆ! ಹಿಂಗಳಾ ನದಿಯ ಪಕ್ಕದ ಚಂದ್ರಕೂಪ ಬೆಟ್ಟದಲ್ಲಿರುವ ಈ ಮಂದಿರ ಭಾರತದ ಗಡಿಯಾಚೆ ಹಿಂದೂ-ಮುಸ್ಲಿಮ್ ಭಾವೈಕ್ಯವನ್ನು ಸಾರುತ್ತಿದೆ.

ಪಾಕಿಸ್ತಾನದ ಬಲೂಚಿಸ್ಥಾನ್ ಎಂಬ ಪ್ರಾಂತ್ಯಕ್ಕೆ ಸೇರ್ಪಡೆ ಆಗುವ ಲ್ಯರಿ ತೆಹ್ಸಿಲ್ ಅನ್ನುವ ಬೆಟ್ಟದ ಪ್ರದೇಶದಲ್ಲಿ ಹಿಂಗ್ಲಾಜ್ ಮಾತ ಗುಹಾಲಯವಿದ್ದು ಈ ಗುಹಾಲಯವೂ ಕರಾಚಿಯಿಂದ ಸುಮಾರು 250 ಕಿ.ಮೀ.,ವಾಯುವ್ಯ ದಿಕ್ಕಿನಲ್ಲಿ ಇದೆ. ಅಷ್ಟೇ ಅಲ್ಲದೆ ಅರಬ್ಬಿ ಸಮುದ್ರದಿಂದ 12 ಮೈಲಿ,ಹಾಗು ಇಂಡಸ್ನಾ ಪಶ್ಚಿಮ ದಿಕ್ಕಿನಿಂದ ಸುಮಾರು 80 ಮೈಲಿ ಅಲ್ಲಿ ಕಾಣ ಸಿಗುತ್ತದೆ. ಖೀರ್ ಥಾರ್ ಬೆಟ್ಟ ಪ್ರದೇಶದ ಅಂತ್ಯದಿಂದ,ಮಕ್ರಾನ್ ಮರುಭೂಮಿ ಅಗಲಕ್ಕೂ ಹಿಂಗೋಳ್ ನದಿಯ ಸುತ್ತಲು ವಿಸ್ತಾರಗೊಂಡಿದ್ದು ಈ ಸ್ಥಳವು ಹಿಂಗೋಳ ರಾಷ್ಟ್ರೀಯ ಉದ್ಯಾನವನಕ್ಕೆ ಸೇರ್ಪಡೆಯಾಗಿದೆ.

ತ್ರೇತಾಯುಗದಲ್ಲಿ ಪ್ರಭು ಶ್ರೀರಾಮನೇ ಈ ದೇವಾಲಯಕ್ಕೆ ಭೇಟಿ ನೀಡಿದ್ದರು!!

ಅದಲ್ಲದೆ ಈ ದೇವಾಲಯಕ್ಕೆ ಅನೇಕ ಪೌರಾಣಿಕ ಹಿನ್ನಲೆಯಿದ್ದು ತ್ರೇತಾಯುಗದಲ್ಲಿ ಸ್ವಯಂ ಶ್ರೀ ರಾಮನೆ ದೇವಿಯ ದರ್ಶನಗೈದಿದ್ದರೆನ್ನಲಾಗುತ್ತದೆ. ಹಿಂಗಳಾದೇವಿಯ ದರ್ಶನಕ್ಕಾಗಿ ಗುರು ಗೋರಖನಾಥ, ಗುರು ನಾನಕ ದೇವರು, ಮತ್ತು ದಾದಾ ಮಖಾನ್ ಎಂಬ ಮಹಾಪುರುಷರೂ ಕೂಡ ಈ ಬೆಟ್ಟವನ್ನು ಹತ್ತಿದ್ದಾರೆ. ಈ ಗುಹಾದೇವಾಲಯದೊಳಗೆ ಮಾನವ ನಿರ್ಮಿತ ಮೂರ್ತಿಗಳಿಲ್ಲ. ಪ್ರಾಕೃತಿಕವಾಗಿ ಕಲ್ಲೊಂದನ್ನು ಹಿಂಗಳಾದೇವಿ ಎಂದು ಪೂಜಿಸಲಾಗುತ್ತದೆ. ಪ್ರತಿವರ್ಷ ಏಪ್ರಿಲ್ ನಲ್ಲಿ ಜರುಗುವ ಹಿಂಗಳಾದೇವಿ ತೀರ್ಥಯಾತ್ರೆಗೆ ಪ್ರಪಂಚದ ಮೂಲೆ ಮೂಲೆಗಳಿಂದಲೂ ಭಕ್ತಾದಿಗಳು ಬರುತ್ತಾರೆ. ಭಾರತದ ಭಕ್ತಾದಿಗಳ ಒಂದು ಸಮೂಹವೂ ಯಾತ್ರೆಯಲ್ಲಿ ಪಾಲ್ಗೊಳುತ್ತದೆ.

ಹಿಂಗಳಾದೇವಿ ಮಂದಿರವು “ಬ್ರಹ್ಮ ಕ್ಷತ್ರಿಯರ” ಕುಲ ದೇವಿಯ ಮಂದಿರವಾಗಿದ್ದು ಇದರ ಹಿಂದೆಯೂ ಒಂದು ಕಥೆ ಇದೆ. ಭಗವಾನ್ ಪರಶುರಾಮರು ಕ್ಷತ್ರಿಯರನ್ನು ಸಂಹಾರ ಮಾಡುತ್ತಿದ್ದ ಕಾಲದಲ್ಲಿ ಇಲ್ಲಿಯ ಬ್ರಾಹ್ಮಣರು ತಮ್ಮ ಮನೆಗಳಲ್ಲಿ ಕ್ಷತ್ರಿಯರಿಗೆ ಅಡಗಿಕೊಳ್ಳಲು ಜಾಗ ನೀಡುತ್ತಾರೆ.. ಪ್ರಾಣ ರಕ್ಷಣೆಗಾಗಿ ಬ್ರಾಹ್ಮಣರಂತೆ ವೇಷ ಬದಲಾಯಿಸಿದ ಕ್ಷತ್ರಿಯರು ತದನಂತರ ಬ್ರಾಹ್ಮಣರೆ ಆಗಿ ಬ್ರಹ್ಮ ಕ್ಷತ್ರಿಯರೆನಿಸಿಕೊಳ್ಳುತ್ತಾರೆ. ಈ ಮಂದಿರಕ್ಕೆ ಸಂಬಂಧಿಸಿದ ಕೌತಕ ವಿಚಾರವೆಂದರೆ ಇಲ್ಲಿ ರಾತ್ರಿಕಾಲದಲ್ಲಿ ಎಲ್ಲಾ ಶಕ್ತಿಗಳು ಒಟ್ಟಾಗಿ ರಾಸ ನೃತ್ಯ ಗೈಯುತ್ತವಂತೆ ಮತ್ತೆ ಬೆಳಗಾದರೆ ತಮ್ಮ ಸ್ವಸ್ಥಾನ ಸೇರಿಕೊಳ್ಳುತ್ತವಂತೆ!! ಅನ್ಯ ಹಿಂದೂ ಮಂದಿರಗಳಂತೆಯೆ ಮತಾಂಧರು ಈ ಮಂದಿರವನ್ನೂ ಧ್ವಂಸಗೈಯಲು ಬಂದಿದ್ದರಂತೆ. ಆದರೆ ದೇವಿಯ ಶಕ್ತಿಯಿಂದ ಮಂದಿರ ಹಾಳುಗೆಡವಲು ಬಂದ ದೂರ್ತರು ಗಾಳಿಯಲ್ಲಿ ಹಾರಾಡುತ್ತಿದ್ದರಂತೆ. ಅಂದಿನಿಂದ ಇಂದಿನವರೆಗೂ ಈ ಮಂದಿರದ ಗೋಜಿಗೆ ಯಾರೂ ಹೋಗಿಲ್ಲ.

ಹಿಂಗ್ಲಾಜ್ ದೇವಿಗೆ ನಾಲ್ಕು ದಿನಗಳ ವಾರ್ಷಿಕ ತೀರ್ಥಯಾತ್ರೆ ಪ್ರತಿವರ್ಷ ಏಪ್ರಿಲ್ನಲ್ಲಿ ಆಯೋಜಿಸಲಾಗುತ್ತದೆ. ತೀರ್ಥಯಾತ್ರೆಯ ಮುಖ್ಯ ಸಮಾರಂಭವು ಮೂರನೇ ದಿನ ನಡೆಯುತ್ತದೆ. ಆ ಸಮಯದಲ್ಲಿ ಪೂಜಕರು ಸ್ಥಳೀಯ ದೇವರನ್ನು ಆಹ್ವಾನಿಸಲು ಮಂತ್ರಗಳನ್ನು ಪಠಿಸುತ್ತಾರೆ. ಅದಲ್ಲದೆ ಯಾತ್ರಾರ್ಥಿಗಳು ತಂದ ಅರ್ಪಣೆಗಳನ್ನು ಸ್ವೀಕರಿಸುತ್ತಾರೆ ಮತ್ತು ಆಶೀರ್ವದಿಸುತ್ತಾರೆ. ಈ ಅರ್ಪಣೆಗಳು ಪ್ರಾಥಮಿಕವಾಗಿ ಮೂರು ತೆಂಗಿನಕಾಯಿಗಳನ್ನು ಒಳಗೊಂಡಿರುತ್ತವೆ. ಕರಾಚಿಯ ನಾನಾದ್ ಪಾಂತಿ ಅಖಾಡಾದಿಂದ ಈ ಸ್ಥಳಕ್ಕೆ ತೀರ್ಥಯಾತ್ರೆ ಆರಂಭವಾಗುತ್ತದೆ. ಯಾತ್ರಾರ್ಥಿಗಳು ಸದಾಸ್ ಹಿಂದೂ ಸಂಘಟನೆಯಾದ ಅಖಾಡರಿಂದ ಅಧಿಕಾರ ಪಡೆದ ಪವಿತ್ರ ಸಿಬ್ಬಂದಿ ಧಾರಕರಾಗಿದ್ದಾರೆ.

ಪಾಕಿಸ್ತಾನ ಮತ್ತು ಭಾರತದಾದ್ಯಂತದ ಯಾತ್ರಿಕರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ, ಸಾಂಪ್ರದಾಯಿಕ ಕೆಂಪು ಬಣ್ಣದ ಬ್ಯಾನರ್ಗಳನ್ನು ಹಿಡಿದು ಕೆಂಪು ಬಣ್ಣದ ಶಿರೋವಸ್ತ್ರಗಳನ್ನು ತಲೆಗೆ ಧರಿಸಿರುತ್ತಾರೆ. ಈ ಶಿರೋವಸ್ತ್ರಗಳು ಅನೇಕ ಪವಿತ್ರ ಸ್ಥಳಗಳಿಂದಲೂ ಹಿಂದೂ ದೇವತೆಗಳೊಂದಿಗೆ ಸಂಬಂಧ ಹೊಂದಿವೆ. ಅದಲ್ಲದೆ ಈ ದೇವರ ಬಗ್ಗೆ ಯಾವ ರೀತಿ ಭಕ್ತಿಯನ್ನು ಹೊಂದಿದ್ದಾರೆ ಎಂಬುವುದು ತಿಳಿಯುತ್ತದೆ. ಈ ದೇವಾಲಯಕ್ಕೆ ಹೋಗಲು ಆರಂಭದಲ್ಲಿ ಪ್ರಯಾಣವು ಮರುಭೂಮಿಯ ಮೂಲಕ 150 ಕಿಲೋಮೀಟರ್ಗಿಂತಲೂ ಹೆಚ್ಚು ಕಿಲೋಮೀಟರುಗಳಷ್ಟು ದೂರದಲ್ಲಿತ್ತು. ಆದರೆ ಕರಾಚಿಯನ್ನು ಗ್ವಾಡಾರ್ನೊಂದಿಗೆ ಸಂಪರ್ಕಿಸುವ ಮಕ್ರಾನ್ ಕರಾವಳಿ ಹೆದ್ದಾರಿಯ ನಿರ್ಮಾಣದಿಂದ ಈಗ ಅದನ್ನು ಸುಲಭವಾಗಿ ಮಾಡಲಾಗಿದೆ. ಹೀಗಾಗಿ ವರ್ಷಗಳಲ್ಲಿ ಯಾತ್ರಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಒಟ್ಟಾರೆಯಾಗಿ ಹಿಂದೂಗಳೆಂದರೆ ಉರಿದು ಬೀಳುವ ಪಾಕಿಸ್ತಾನದಲ್ಲಿ ಕೂಡಾ ಹಿಂದೂಗಳ ಆರಾಧ್ಯ ದೇವರನ್ನು ಪೂಜಿಸುತ್ತಾರೆ ಎಂದರೆ ನಾವು ಹೆಮ್ಮೆ ಪಡಲೇಬೇಕು…

Be the first to comment