ಗಡಿನುಸುಳಲು ಪ್ರಯತ್ನ ಮಾಡಿದ ಉಗ್ರರಿಗೆ ತಕ್ಕ ಶಾಸ್ತಿ ಮಾಡಿದ ಭಾರತೀಯ ಸೇನೆ… ಹೆದರಿ ಕಾಲ್ಕಿತ್ತ ಉಗ್ರರು…

ಭಾರತದೊಳಗೆ ಪಾಕಿಸ್ತಾನ ತನ್ನ ಉಗ್ರರ ಒಳನುಸುಳುವಿಕೆಯನ್ನು ನಿಲ್ಲಿಸದಿದ್ದರೆ, ಬಾಲಕೋಟ್ ಉಗ್ರರ ತರಬೇತಿ ನೆಲೆಗಳ ಮೇಲೆ ನಡೆಸಲಾದ ವೈಮಾನಿಕ ದಾಳಿಗಳು ಪುನರಾವರ್ತನೆಗೊಳ್ಳಲಿವೆ ಎಂದು ಪಾಕಿಸ್ತಾನಕ್ಕೆ ಈಗಾಗಲೇ ಭಾರತೀಯ ವಾಯುಪಡೆ ಎಚ್ಚರಿಸಿಕೆ ನೀಡಿತ್ತು. ನಾವು ಮೊದಲು ದಾಳಿ ಮಾಡುವುದಿಲ್ಲ. ಆದರೆ, ಪಾಕಿಸ್ತಾನವೇನಾದರೂ ದಾಳಿ ಮಾಡಿದ್ದೇ ಆದರೆ, ಭಾರತ ಸರ್ಕಾರ ಯಾವುದೇ ಆದೇಶ ನೀಡಿದರೂ ಆ ಪ್ರಕಾರ ಪ್ರತಿಕ್ರಿಯೆ ನೀಡುತ್ತೇವೆ. ಸರ್ಕಾರ ಯಾವ ರೀತಿ ಹೇಳುತ್ತೋ, ಅದರ ಅನುಸಾರ ನಾವು ನಡೆಯಲಿದ್ದೇವೆಂದು ತಿಳಿಸಿದ್ದರು. ಅದೇ ರೀತಿ ನಿನ್ನೆ ರಾತ್ರಿಗಡಿ ನುಸುಳಲು ಉಗ್ರರು ಹೊಂಚು ಹಾಕಿದ್ದಕ್ಕೆ ನಮ್ಮ ಸೇನೆ ತಕ್ಕ ಶಾಸ್ತಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಸೆಕ್ಟರ್ ಗಡಿ ನಿಯಂತ್ರಣ ರೇಖೆ ಬಳಿ ಗಡಿ ನುಸಳಲು ಯತ್ನ ನಡೆಸುತ್ತಿದ್ದ ಉಗ್ರರಿಗೆ ಸೇನೆ ದಿಟ್ಟ ಉತ್ತರ ನೀಡಿದ್ದು, ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ರಾತ್ರಿ 11.30ರ ಸುಮಾರಿಗೆ, 4-5 ಉಗ್ರರು ಗಡಿ ನುಸುಳಲು ಯತ್ನ ನಡೆಸಿದ್ದರು. ಇದನ್ನು ಗಮನಿಸಿದ ಭಾರತೀಯ ಸೇನೆ ಉಗ್ರರಿಗೆ ದಿಟ್ಟ ಉತ್ತರ ನೀಡಿದೆ. ಸೇನೆಯ ದಾಳಿಗೆ ಹೆದರಿದ ಉಗ್ರರು ಮತ್ತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದತ್ತ ಕಾಲ್ಕಿತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬಾರಾಮುಲ್ಲಾ ಗಡಿ ನಿಯಂತ್ರಣ ರೇಖೆ ಬಳಿ ಗಡಿ ನುಸುಳಲು ಯತ್ನ ನಡೆಸುತ್ತಿದ್ದ ಇಬ್ಬರು ಉಗ್ರರನ್ನು ಸೇನೆ ಹೊಡೆದುರುಳಿಸಿತ್ತು.

Be the first to comment