ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ್ದ ಉಗ್ರ ಸಂಘಟನೆ ಅಲ್ ಖೈದಾ ಮುಖ್ಯಸ್ಥ ಅಸಿಮ್ ಉಮರ್ ಹತ್ಯೆ…

ಕುಖ್ಯಾತ ಉಗ್ರ ಸಂಘಟನೆ ಅಲ್ ಖೈದಾದ ಮುಖ್ಯಸ್ಥ ಅಸಿಮ್ ಉಮರ್ ನನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ್ದು, ಅಫ್ಘಾನಿಸ್ಥಾನದ ದಕ್ಷಿಣ ಭಾಗದಲ್ಲಿರುವ ಹೆಲ್ಮಂಡ್ ಪ್ರಾಂತ್ಯದ ಮುಸಾ ಖಲಾ ಜಿಲ್ಲೆಯಲ್ಲಿ ಭಾರತೀಯ ಉಪಖಂಡದ ಅಲ್ ಕೈದಾ ಮುಖ್ಯಸ್ಥ ಅಸೀಮ್ ಉಮರ್ ಹತನಾಗಿದ್ದಾನೆ ಎಂದು ತಿಳಿದುಬಂದಿದೆ. ಅಮೆರಿಕದ ಸೇನಾಪಡೆಗಳು ಅಫ್ಘಾನಿಸ್ತಾನದಲ್ಲಿ ಅಲ್ ಖೈದಾ ಉಗ್ರರ ಮೇಲಿನ ದಾಳಿ ಮುಂದುವರಿಸಿದ್ದು, ಈ ದಾಳಿಯಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

2015 ರಲ್ಲಿ ಅಸಿಮ್ ಒಮರ್ ವಿಡಿಯೋ ಬಿಡುಗಡೆ ಮಾಡಿ ಅಮೆರಿಕ, ವಿಶ್ವಸಂಸ್ಥೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಇಸ್ಲಾಂ ಧರ್ಮದ ಶತ್ರುಗಳೆಂದು ಪರಿಗಣಿಸಿ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆದರೆ ಇದೀಗ ಬೆದರಿಕೆ ಹಾಕಿದವನು ಸೀದಾ ಯಮ ಪಾಲಾಗಿದ್ದಾನೆ. ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ನಿರ್ದೇಶಕರ ಪ್ರಕಾರ, ಸೆಪ್ಟೆಂಬರ್ 23 ರಂದು ಹೆಲ್ಮಂಡ್ ಪ್ರಾಂತ್ಯದ ಮೂಸಾ ಖಾಲಾ ಜಿಲ್ಲೆಯ ತಾಲಿಬಾನ್ ಕಾಂಪೌಂಡ್‍ನಲ್ಲಿ ಜಂಟಿ ಕಾರ್ಯಾಚರಣೆಯಲ್ಲಿ ಅಸಿಮ್ ಒಮರ್ ನನ್ನು ಯುಎಸ್ ಮತ್ತು ಅಫ್ಘಾನ್ ಸೈನ್ಯ ಕೊಂದಿದೆ. ಅದಲ್ಲದೆ 6 ಇತರ ಅಲ್ ಖೈದಾದ ಸದಸ್ಯರು ಕೂಡಾ ಈ ದಾಳಿಯಲ್ಲಿ ಕೊಲ್ಲಲ್ಪಟ್ಟರು ಮತ್ತು ಅವರಲ್ಲಿ ಹೆಚ್ಚಿನವರು ಪಾಕಿಸ್ತಾನಿಗಳು ಎಂಬುವುದು ವರದಿಯಾಗಿದೆ.

ತನಿಖೆಯ ನಂತರ, ಮೌಲಾನಾ ಅಸಿಮ್ ಒಮರ್ ಭಾರತ ಮೂಲದವನು ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿವೆ. ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ನಿವಾಸಿಯಾಗಿದ್ದ ಈತ 1990 ರ ದಶಕದಲ್ಲಿ ಅಸಿಮ್ ಒಮರ್ ಮನೆಯಿಂದ ನಾಪತ್ತೆಯಾಗಿದ್ದ. ನಂತರ ಆತ ಪಾಕಿಸ್ತಾನದಲ್ಲಿದ್ದಾನೆ ಎಂದು ವರದಿಯಾಗಿದೆ. ಅಮೆರಿಕದ ಮೇಲೆ 9/11 ದಾಳಿಯ ನಂತರ ಅಲ್ ಖೈದಾ ಸಾಕ್ಷ್ಯ ಚಿತ್ರದಲ್ಲಿ ಒಸಿಮಾ ಬಿನ್ ಲಾಡೆನ್ ನೊಂದಿಗೆ ಅಸಿಮ್ ಒಮರ್ ಕಾಣಿಸಿಕೊಂಡಿದ್ದಾನೆ. ಅಮೆರಿಕಾ ಆತನನ್ನು 2016 ರಲ್ಲಿ ಜಾಗತಿಕ ಭಯೋತ್ಪಾದಕ ಪಟ್ಟಿಯಲ್ಲಿ ಸೇರಿಸಿಕೊಂಡಿದೆ. ಮೌಲಾನಾ ಒಮರ್ ಭಾರತದಲ್ಲಿ ಜಿಹಾದ್ ಹರಡಲು ಇತ್ತೀಚಿಗೆ ಭಾರೀ ಪ್ರಯತ್ನ ಪಟ್ಟು ಹಲವಾರು ವೀಡಿಯೊಗಳನ್ನು ಬಿಡುಗಡೆ ಮಾಡಿದ್ದ. ಕೆಲ ವೀಡಿಯೋಗಳಲ್ಲಿ ಭಾರತೀಯ ತನಿಖಾ ಸಂಸ್ಥೆಗಳು ಮತ್ತು ಪೆÇಲೀಸರ ಮೇಲೆ ದಾಳಿಯನ್ನು ಮಾಡುವ ಬೆದರಿಕೆ ಹಾಕಿದ್ದಲ್ಲದೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಬೆದರಿಕೆ ಹಾಕಿದ್ದ. ಆದರೆ ಉಗ್ರ ಅಸಿಮ್ ಉಮರ್ ನನ್ನು ಭದ್ರತಾ ಪಡೆಗಳು ಯಮಪಾಲಾಗಿಸಿದೆ.

Be the first to comment