ರಾಮಜನ್ಮಭೂಮಿಯ ನಕ್ಷೆ ಹರಿದದ್ದು ನಿಮ್ಮ ಕಕ್ಷಿದಾರರ ಸಂತೃಪ್ತಿಗಾ ರಾಜೀವ್!!

ರಾಮಜನ್ಮ ಭೂಮಿ ಪ್ರಕರಣ ಅಂತ್ಯ ಕಾಣಲು ಕಾಲ ಸನ್ನಿಹಿತವಾಗಿದೆ.  ಈ ಪ್ರಕರಣದಲ್ಲಿ ತೀರ್ಪು ಏನು ಹೊರಬೀಳುತ್ತದೆಯೋ ಅದು ಭಗವಂತ ಶ್ರೀರಾಮನ ಆಶಯದಂತೆ ಆಗಲಿದೆ. ಕೊನೆಗೂ ಸತ್ಯಕ್ಕೆ ಜಯವಾಗಲಿದೆ. ಆದರೆ ವಕೀಲರೊಬ್ಬರು ವಿಚಾರಣೆಯ ಅಂತಿಮ ದಿನ ವರ್ತಿಸಿದ್ದ ರೀತಿ ಮಾತ್ರ ಸರಿಯಲ್ಲ ಎನ್ನುವುದು ನನ್ನ ಅನಿಸಿಕೆ. ನಿಮಗೆಲ್ಲಾ ಗೊತ್ತಿರುವಂತೆ ಮುಸ್ಲಿಮರ ಪರವಾಗಿ ರಾಜೀವ್ ಧವನ್ ಎನ್ನುವ ವಕೀಲರೊಬ್ಬರು ವಾದ ಮಾಡುತ್ತಾ ಬಂದಿದ್ದರು. ಮುಸ್ಲಿಮರ ಪರ ಹಿಂದೂ ವಕೀಲರಾ ಎಂದು ಹುಬ್ಬೇರಿಸುವ ಅಗತ್ಯ ಇಲ್ಲ. ಯಾರ ಪರವಾಗಿಯೂ ಯಾರೂ ವಾದ ಮಾಡಬಹುದು. ಯಾಕೆಂದರೆ ವಾದಿಸುವ ವಕೀಲರಿಗೆ ಅಲ್ಲಿ ತಮ್ಮ ಕಕ್ಷಿದಾರರ ಗೆಲುವು ಮುಖ್ಯವೇ ಹೊರತು ಸತ್ಯದ ಗೆಲುವಲ್ಲ. ತಮ್ಮ ಕಕ್ಷಿದಾರ ನಿಜವಾಗಿಯೂ ಘೋರ ಅಪರಾಧ ಮಾಡಿದ್ದಾರೆ ಎಂದು ಗೊತ್ತಿದ್ರೂ ಅದಕ್ಕೆ ಸರಿಯಾಗಿ ಸುಳ್ಳು ಸಾಕ್ಷ್ಯಗಳನ್ನು ಪೋಣಿಸುತ್ತಾ ನ್ಯಾಯ ಪೀಠದ ಎದುರು ವಾದ ಮಾಡುವುದು ಒಬ್ಬ ವಕೀಲರ ಕರ್ತವ್ಯ. ಅವರಿಗೆ ಸತ್ಯ ಗೆಲ್ಲಬೇಕು ಎನ್ನುವುದಕ್ಕಿಂತ ತಮ್ಮ ಕಕ್ಷಿದಾರ ಗೆಲ್ಲಬೇಕು ಎನ್ನುವ ಸೂತ್ರ. ಇದಕ್ಕೆ ಹೊರತಾಗಿರುವ ವಕೀಲರೂ ಇರಬಹುದು. ಆದರೆ ಕಡಿಮೆ. ಆದರೆ ಒಬ್ಬ ವಕೀಲ ಒಂದು ಕೇಸು ಸೋಲುವ ಸಂದರ್ಭ ಬಂದಾಗ ಹತಾಶನಾಗಿ ನ್ಯಾಯಾಲಯದ ಒಳಗೆ ವರ್ತಿಸಬಾರದು. ತನ್ನ ಗೆಲುವಿಗಾಗಿ ಯಾವ ಮಟ್ಟಕ್ಕೂ ಇಳಿಯುತ್ತೇನೆ ಎಂದು ನಿರ್ಧರಿಸಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಕರಣವನ್ನು ಪರ್ಸನಲ್ ಆಗಿ ತೆಗೆದುಕೊಳ್ಳಬಾರದು. ಆದರೆ ಅಯೋಧ್ಯಾ ಪ್ರಕರಣದಲ್ಲಿ ರಾಜೀವ್ ಧವನ್ ಆರಂಭದಿಂದ ನ್ಯಾಯಪೀಠದ ವಿರುದ್ಧ ಆಕ್ಷೇಪವನ್ನು ಎತ್ತುತ್ತಿದ್ದರು. “ನೀವು ನಮಗೆ ಮಾತ್ರ ಹೆಚ್ಚು ಕ್ರಾಸ್ ಕ್ವಶ್ವನ್ ಕೇಳುತ್ತೀರಿ, ಅದೇ ಅವರಿಗೆ ಕೇಳುತ್ತಿಲ್ಲ” ಎಂದೇ ನ್ಯಾಯಪೀಠಕ್ಕೆ ಹೇಳುತ್ತಿದ್ದರು. ಈ ಮೂಲಕ ನ್ಯಾಯಪೀಠದ ವಿಶ್ವಾಸರ್ಹತೆಯನ್ನು ಪ್ರಶ್ನಿಸುವಂತಹ ಪ್ರಸಂಗಕ್ಕೆ ಕೈಹಾಕುತ್ತಿದ್ದರು. ನಂತರ ಒಂದು ಹಂತದಲ್ಲಿ ಸ್ವತ: ಮುಖ್ಯ ನ್ಯಾಯಮೂರ್ತಿಯವರೇ ಹಿಂದೂಪರ ವಕೀಲರಿಗೆ ಪ್ರಶ್ನೆ ಮಾಡುವಾಗ “ನೋಡಿ ರಾಜೀವ್ ಧವನ್, ನಾವು ಅವರಿಗೂ ಪ್ರಶ್ನೆ ಮಾಡುತ್ತಿದ್ದೇವೆ. ನಿಮ್ಮ ಗಮನದಲ್ಲಿ ಇದು ಇರಲಿ” ಎಂದು ಹೇಳುವ ಅವಶ್ಯಕತೆ ಕೂಡ ಬಂದಿತ್ತು. ಈಗ ಕೊನೆಯ ದಿನ ರಾಮಜನ್ಮ ಭೂಮಿಯ ನಕ್ಷೆಯನ್ನು ಹಿಂದೂ ಮಹಾಸಭಾದ ಪರ ವಕೀಲರು ನ್ಯಾಯಮೂರ್ತಿಗಳ ಬೆಂಚಿಗೆ ಕೊಡಲು ಹೋದಾಗ ಅದನ್ನು ಪಡೆದುಕೊಂಡ ರಾಜೀವ್ ಧವನ್ ಅದನ್ನು ಹರಿದುಹಾಕಿದ್ದಾರೆ. ಇದನ್ನು ನೋಡಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯಿ ಕೆರಳಿಕೆಂಡವಾಗಿದ್ದರು ಎಂದು ಮಾಧ್ಯಮ ವರದಿ ಹೇಳುತ್ತದೆ. ಇದು ಏನನ್ನು ಸೂಚಿಸುತ್ತದೆ?

ತರಗತಿಯಲ್ಲಿ ಪಕ್ಕದಲ್ಲಿ ಕುಳಿತಿರುವ ಸಹಪಾಠಿ ಹೋಂವರ್ಕ್ ಮಾಡಿ ಬಂದಾಗ ನೀವು ಹೋಂವರ್ಕ್ ಮಾಡದೇ ಇದ್ದರೆ ಪಕ್ಕದವನ ನೋಟ್ ಬುಕ್ ಹರಿದು ಬಿಸಾಡುವುದು ಎಷ್ಟು ಸಮಂಜಸ. ಇದನ್ನು ಟೀಚರ್ ನೋಡಿದ್ರೆ ಏನು ತಾನೇ ಹೇಳಿಯಾರು? ನಾಲ್ಕು ಬಾರಿಸಿ ಕ್ಲಾಸಿನಿಂದ ಹೊರಗೆ ಹಾಕಲ್ವಾ? ನಿಮಗೆ ಸರಿಯಾಗಿ ಬುದ್ಧಿ ಬರದ ಸಮಯದಲ್ಲಿಯೇ ನೀವು ಮಾಡುವ ಚೇಷ್ಟೆಗಳಿಗೆ ನಿಮಗೆ ಶಿಕ್ಷೆ ಸಿಗುತ್ತೆ ಎಂದಾದರೆ ತುಂಬಿದ ನ್ಯಾಯಾಲಯದ ಸಭಾಂಗಣದಲ್ಲಿ ಇಡೀ ದೇಶವೇ ಕಾತರದಿಂದ ಕಾಯುತ್ತಿರುವ ಪ್ರಕರಣದಲ್ಲಿ ಹೀಗೆ ಮಾಡುವುದು ಎಷ್ಟರಮಟ್ಟಿಗೆ ಸರಿ. ಒಂದು ವೇಳೆ ಸ್ವತ: ನ್ಯಾಯಮೂರ್ತಿಗಳೇ ಈ ನಕ್ಷೆಯನ್ನು ಹರಿಯಿರಿ ಎಂದು ಕೊಟ್ಟರೂ ಹರಿಯಬಾರದು. ಏಕೆಂದರೆ ಭಗವಂತ ಶ್ರೀ ರಾಮ ಹುಟ್ಟಿದ ಪವಿತ್ರಭೂಮಿಯ ನಕ್ಷೆ ಇರುವ ಕಾಗದವನ್ನು ಹರಿಯುವುದು ಎಷ್ಟರಮಟ್ಟಿಗೆ ಸರಿ. ಅಷ್ಟಕ್ಕೂ ಆ ನಕ್ಷೆ ಹಿಂದೂ ಮಹಾಸಭಾದ ವಕೀಲರು ತಮ್ಮ ಕಚೇರಿಯಲ್ಲಿ ಹಿಂದಿನ ದಿನ ರಾತ್ರಿ ಕುಳಿತು ಬಿಡಿಸಿ ಬೆಳಿಗ್ಗೆ ಕೋರ್ಟಿಗೆ ಬಂದಾಗ ತಂದದ್ದಲ್ಲ. ಅದು ಭಾರತದ ಮತ್ತು ವಿದೇಶಿ ಸಂಶೋಧಕರು ಎಷ್ಟೋ ವರ್ಷಗಳ ಹಿಂದೆ ಸಂಶೋಧನೆ ಮಾಡಿ ಬರೆದ ನಕ್ಷೆಯಾಗಿತ್ತು. ಇನ್ನು ಆ ನಕ್ಷೆಯನ್ನೇ ಅಂತಿಮ ಎಂದು ಪರಿಗಣಿಸಬೇಕು ಎಂದು ಹಿಂದೂ ಮಹಾಸಭಾದ ವಕೀಲರು ಹಟ ಹಿಡಿದಿರಲಿಲ್ಲ. ಈ ಹಿಂದೆನೂ ಲೇಖಕರು ತಮ್ಮ ಪುಸ್ತಕಗಳಲ್ಲಿ ರಾಮಜನ್ಮಭೂಮಿಯ ಬಗ್ಗೆ ನಕ್ಷೆ ಬಿಡಿಸಿದ್ದಾರೆ ಎಂದು ತೋರಿಸಲು ತಮ್ಮ ಸಾಕ್ಷ್ಯವನ್ನು ತೋರಿಸುತ್ತಿದ್ದರು. ಹಾಗಿರುವಾಗ ಅದನ್ನು ಹರಿಯುವ ವಿಷಯ ಬಿಡಿ, ಆ ಬಗ್ಗೆ ಯೋಚಿಸುವುದು ಕೂಡ ತಪ್ಪಾಗುತ್ತದೆ. ಅಂಗಡಿಯಿಂದ ತಿಂಡಿ ಕಟ್ಟಿ ಕೊಂಡು ಮನೆಗೆ ಬರುವ ನಾವು ಕಟ್ಟಿದ ಕಾಗದದಲ್ಲಿ ದೇವರ ಫೋಟೋ ಇದ್ದರೆ ಹರಿಯಲು ನೂರು ಸಲ ಯೋಚಿಸುತ್ತೇವೆ. ಹಾಗಿರುವಾಗ ನ್ಯಾಯಾಲಯದ ಒಳಗೆ ಅಯೋಧ್ಯೆಯ ನಕ್ಷೆ ಹರಿಯುವ ಮನಸ್ಥಿತಿ ಕೇವಲ ತಮ್ಮ ಕಕ್ಷಿದಾರರನ್ನು ಸಂತೃಪ್ತಿಪಡಿಸುವ ನಾಟಕವೇ ರಾಜೀವ್ ಧವನ್!

Be the first to comment