ಅಯೋಧ್ಯೆಯ ವಿಚಾರದಲ್ಲಿ ಸಂಧಾನಕ್ಕೆ ಸಿದ್ಧ ಎಂದ ಸುನ್ನಿ ವಕ್ಫ್ ಬೋರ್ಡ್!!

ಇನ್ನೇನೂ ತೀರ್ಪು ಹೊರಗೆ ಬರಬೇಕು ಎಂದು ಹೇಳುವಷ್ಟರಲ್ಲಿ ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹೋರಾಡುತ್ತಿರುವ ಮೂರು ಗುಂಪುಗಳಲ್ಲಿ ಒಂದು ಗುಂಪು ಹೊಸ ವರಸೆ ಶುರು ಮಾಡಿಕೊಂಡಿದೆ. ಅದೇನೆಂದರೆ “ನಾವು ಕಾಂಪ್ರೋಮೈಸ್ ಮಾಡಲು ರೆಡಿ” ಎಂದು ಹೇಳುತ್ತಿದೆ. ಆ ಗುಂಪಿನ ಹೆಸರು ಸುನ್ನಿ ವಕ್ಫ್ ಬೋರ್ಡ್. ಅವರು ಈಗ ನಿದ್ರೆಯಿಂದ ಎಚ್ಚರಗೊಂಡು ನಾವು ಕಾಂಪ್ರಮೈಸ್ ಗೆ ತಯಾರಾಗಿದ್ದೇವೆ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಈ ಪ್ರಕರಣವನ್ನು ಇಷ್ಟು ದೀರ್ಘ ಎಳೆಯುವ ಬದಲು ಮೂರು ಗುಂಪುಗಳು ಯಾವತ್ತೋ ಕಾಂಪ್ರೋಮೈಸ್ ಗೆ ಇಳಿದಿದ್ದರೆ ಈ ಪರಿ ನಾವು ತೀರ್ಪಿಗೆ ಕಾಯುವ ಅವಶ್ಯಕತೆ ಇರಲಿಲ್ಲ. ಅದು ಬಿಡಿ, ಆರೇಳು ತಿಂಗಳ ಮೊದಲು ಸುಪ್ರೀಂ ಕೋರ್ಟ್ ಮೂರು ಜನರ ಸಮಿತಿಯನ್ನು ರಚಿಸಿ ಈ ಪ್ರಕರಣ ನ್ಯಾಯಾಲಯದ ಹೊರಗೆ ಪರಿಹಾರವಾಗುತ್ತಾ ನೋಡಿ ಎಂದು ಹೇಳಿತ್ತು.  ಅದರಲ್ಲಿ ಸುಪ್ರೀಂಕೋರ್ಟ್ ನ ಮಾಜಿ ನ್ಯಾಯಮೂರ್ತಿ ಎಫ್ ಎಂ ಕಾಲಿಫುಲ್ಲಾ, ಆಧ್ಯಾತ್ಮಿಕ ಗುರು ಶ್ರೀ ಶ್ರೀರವಿಶಂಕರ್ ಹಾಗೂ ಹಿರಿಯ ನ್ಯಾಯವಾದಿ ಶ್ರೀರಾಮ ಮಂಚು ಇದ್ದರು. ಆಗ ಈ ಸಮಿತಿ ಮಾರ್ಚ್ ನಲ್ಲಿ ಕ್ರಿಯಾಶೀಲತೆಯಿಂದ ಕೆಲಸ ಮಾಡಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನೇಕರ ಜೊತೆ ಸಭೆ ಸೇರಿತ್ತು. ಆ ಹಂತದಲ್ಲಿ ಸುನ್ನಿ ವರ್ಫ್ ಬೋರ್ಡಿನ ಸದಸ್ಯರನ್ನು ಕೂಡ ಕರೆದು ಸಂಧಾನ ನಡೆಸಲಾಗಿತ್ತು. ಆದರೆ ರವಿಶಂಕರ್ ಗುರೂಜಿಯವರು ಇರುವ ಸಮಿತಿಯ ಬಗ್ಗೆ ಅಪಸ್ವರ ಎತ್ತಿದ ಸುನ್ನಿ ಬೋರ್ಡ್ ಸಂಧಾನದಿಂದ ಹಿಂದೆ ಸರಿದಿತ್ತು. ಇದೆಲ್ಲದರ ನಂತರ ಅಂತಿಮವಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ತಮ್ಮ ನಿವೃತ್ತಿಯ ಕೊನೆಯ ಐತಿಹಾಸಿಕ ತೀರ್ಪು ಬರೆಯಲು ಅಣಿಯಾದದ್ದು. ಸತತ ನಲ್ವತ್ತು ದಿನಗಳ ತನಕ ನಡೆದ ಅಂತಿಮ ಹಂತದ ವಿಚಾರಣೆ ನಡೆದು ಇನ್ನೇನೂ ತೀರ್ಪು ಮಾತ್ರ ಹೊರಗೆ ಬೀಳಲಿದೆ. ಈಗ ಈ ಹಂತದಲ್ಲಿ ನಾವು ಸಂಧಾನ ಮಾಡಿಕೊಳ್ಳಲು ಬಯಸುತ್ತೇವೆ ಎಂದು ಸುನ್ನಿ ಬೋರ್ಡ್ ಹೇಳುತ್ತಿದೆ.

ಇದಕ್ಕೆ ಮುಖ್ಯ ಕಾರಣ ಕೆಲವು ಇರಬಹುದು. ಒಂದನೇಯದಾಗಿ ಇಡೀ ಪ್ರಕರಣವನ್ನು ಅನಾವಶ್ಯಕವಾಗಿ ಮುಂದೂಡುವ ವ್ಯರ್ಥ ಪ್ರಯತ್ನ ಆಗಿರಬಹುದು. ಒಂದು ವೇಳೆ ನವೆಂಬರ್ 17 ರ ಒಳಗೆ ಪ್ರಕರಣಕ್ಕೆ ಅಂತಿಮ ತೆರೆ ಬೀಳದಿದ್ದರೆ ಆಗ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯಿ ನಿವೃತ್ತರಾಗುತ್ತಾರೆ. ಅದರ ನಂತರ ಮತ್ತೆ ಪ್ರಕರಣ ಮುಂದೂಡುವ ಸಾಧ್ಯತೆ ಇದೆ. ಇನ್ನು ಸಂಧಾನ ಎನ್ನುವ ಮೂಲಕ ತಮ್ಮ ಕಡೆಯಿಂದ ಹಸಿರು ನಿಶಾನೆ ಇದೆ ಎಂದು ತೋರಿಸುವ ಪ್ರಯತ್ನವೂ ಇದರ ಹಿಂದೆ ಅಡಗಿದೆ. ಒಟ್ಟಿನಲ್ಲಿ ಇನ್ನು ಯಾವ ವಿಳಂಬವೂ ಆಗದಂತೆ ತೀರ್ಪು ನೀಡಲು ಸುಪ್ರೀಂ ಕೋರ್ಟ್ ತೀರ್ಮಾನಿಸಿದಂತೆ ಕಾಣುತ್ತದೆ. ರಾಮನ ಮನಸ್ಸಿನಲ್ಲಿ ಏನಿದೆಯೋ ಯಾರು ಬಲ್ಲರು, ಅಲ್ಲವೇ

Be the first to comment