ರಫೆಲ್ ವಿಚಾರ ರಾಹುಲ್ ಗಾಂಧಿಗೆ ವಾರ್ನಿಂಗ್ ನೀಡಿದ ಸುಪ್ರೀಂ ಕೋರ್ಟ್…

ರಫೇಲ್ ಯುದ್ಧ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಚೌಕೀದಾರ್ ಚೋರ್ ಹೈ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂಬ ರಾಹುಲ್ ಗಾಂಧಿಯ ಆರೋಪದ ಕುರಿತು ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಾಹುಲ್ ಕ್ಷಮೆಯಾಚನೆಯನ್ನು ಸ್ವೀಕರಿಸಿದ್ದು, ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟಿರುವುದಾಗಿ ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಿದೆ. ಆದರೆ ಮತ್ತೆ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆಯನ್ನು ಕೊಟ್ಟಿದೆ. ಹೌದು… ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಚೌಕೀದಾರ್ ಚೋರ್ ಹೈ ಎಂಬ ತನ್ನ ಹೇಳಿಕೆಯನ್ನು ಸುಪ್ರೀಂಕೋರ್ಟ್ ಹೇಳಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದರು. ಈ ಬಗ್ಗೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ನ್ಯಾಯಾಂಗ ನಿಂದನೆ ದಾವೆ ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಸಿಜೆಐ ರಂಜನ್ ಗೋಗೊಯಿ ನೇತೃತ್ವದ ತ್ರಿಸದಸ್ಯ ಪೀಠ, ಈ ಬಗ್ಗೆ ಒಂದೋ ಕ್ಷಮೆ ಕೇಳಿ, ಇಲ್ಲವೇ ವಿಚಾರಣೆ ಎದುರಿಸಿ ಎಂದು ರಾಹುಲ್ ಗಾಂಧಿಗೆ ಸೂಚಿಸಿತ್ತು. ಬಳಿಕ ರಾಹುಲ್ ಗಾಂಧಿ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಅಲ್ಲದೇ ಸುಪ್ರೀಂಕೋರ್ಟ್ ಗೂ ಅಫಿಡವಿತ್ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದೆ. ರಾಹುಲ್ ಗಾಂಧಿ ಹೇಳಿಕೆ ದುರಾದುಷ್ಟಕರ. ಇನ್ನು ಮುಂದಾದರೂ ಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿ ಎಂದು ಹೇಳಿದೆ. ಜೊತೆಗೆ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಟ್ಟು ಇನ್ನಾದರೂ ಬೇಕಾ ಬಿಟ್ಟಿ ಹೇಳಿಕೆಯನ್ನು ನೀಡುವ ಮೊದಲು ಯೋಚಿಸಿ ಅಂತಾ ವಾರ್ನಿಂಗ್ ನೀಡಿದೆ. ಇನ್ನೊಂದೆಡೆ ರಫೇಲ್ ಡೀಲ್ ಪ್ರಕರಣ ಸಂಬಂಧ ಕೇಂದ್ರ ಸರ್ಕಾರಕ್ಕೆ ನೀಡಿದ್ದ ಕ್ಲೀನ್ ಚೀಟ್ ಪ್ರಶ್ನಿಸಿ ಅರುಣ್ ಶೌರಿ, ಯಶ್ವಂತ್ ಸಿನ್ಹಾ ಮತ್ತು ಕಾರ್ಯಕರ್ತ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು ಈ ಮೂಲಕ ರಫೇಲ್ ಯುದ್ಧ ವಿಮಾನ ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ.

Be the first to comment