ಅಪ್ರತಿಮ ಸಾಹಸಿ ರಾಣಿ ಲಕ್ಷ್ಮೀಬಾಯಿಯ ಜಯಂತಿ ಇಂದು! ಈಕೆಯ ಸಾಹಸಕ್ಕೆ ಬ್ರಿಟಿಷರೇ ಗಢಗಢ ನಡುಗಿದ್ದರು…

ಯಾರೆಲ್ಲಾ ಈ ನೆಲಕ್ಕಾಗಿ ಪ್ರಾಣತ್ಯಾಗ ಮಾಡಿದ್ದರೋ ಅದರ ಫಲಾವಾಗಿ ಇಂದು ನಾವು ಅದನ್ನು ಅನುಭವಿಸುತ್ತಿದ್ದೇವೆ ಅಷ್ಟೇ. ಭಾರತ ಇತಿಹಾಸದಲ್ಲಿ ವೀರ ವನಿತೆಯರು ಬೆರಳೆಣಿಕೆಯಷ್ಟಿದ್ದರೂ ತಮ್ಮದೇ ಅನನ್ಯತೆಯ ರಾಷ್ಟ್ರಪ್ರೇಮ, ಸಾಹಸದಲ್ಲಿ ಕೆಚ್ಚೆದೆಯಿಂದ ಬಲಿದಾನಗೈದು ದೇಶವೇ ಹೆಮ್ಮೆ ಪಡುವಂತಹ ದಿಟ್ಟತನ ಮೆರೆದಿದ್ದಾರೆ. ಅಂಥವರ ಸಾಲಿನಲ್ಲಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಅನುಪಮ ಧೀರ ಮಹಿಳಾಮಣಿ. ಅದಲ್ಲದೆ ಯಾರೂ ಬಳಸದ ಯುದ್ಧ ತಂತ್ರವನ್ನು ಬಳಸುವ ಮೂಲಕ ಶತ್ರುಗಳಲ್ಲಿ ನಡುಕ ಹುಟ್ಟಿಸಿದ್ದು ಇದೇ ರಾಣಿ ಲಕ್ಷ್ಮೀಬಾಯಿ.

ಮಣಿಕರ್ಣಿಕಾ ಲಕ್ಷ್ಮೀಬಾಯಿ ಆಗಿದ್ದೇಗೆ?!

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಝಾನ್ಸಿರಾಣಿ ಲಕ್ಮೀಬಾಯಿ ಅವರ ಕತೆ ನೆನೆದಾಗಲೆಲ್ಲಾ ಎಂತಹ ಮೃದುಹೃದಯಿಗಳಲ್ಲೂ ಮೈನವಿರೇಳುವಂತಹ ಸಾಹಸದ ಕಿಡಿ ತುಂಬಿಕೊಂಡಂತಹ ಭಾವ ಮೂಡುತ್ತದೆ. ರಾಣಿ ಲಕ್ಷ್ಮೀಬಾಯಿ ಅವರು ನವೆಂಬರ್ 19, 1829ರಲ್ಲಿ ಕಾಶಿಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಮಣಿಕರ್ಣಿಕ ಆಕೆಯ ಬಾಲ್ಯದ ಹೆಸರು. ಮಣಿಕರ್ಣಿಕ ನಾಲ್ಕು ವರ್ಷದ ಎಳೆವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಳು. ತಂದೆ ಮೊರೋಪಂತ್ ತಂಬೆಯವರು ಮುಂದೆ ಝಾನ್ಸಿಯ ಮಹಾರಾಜ ರಾಜ ಗಂಗಾಧರ ರಾವ್ ಅವರ ಆಸ್ಥಾನವನ್ನು ಸೇರಿದರು. ಮಣಿಕರ್ಣಿಕಳಿಗೆ 14 ವರ್ಷವಾದಾಗ ಮಹಾರಾಜ್ ರಾಜ ಗಂಗಾಧರ ರಾವ್ ಅವರೊಡನೆ ಆಕೆಗೆ ವಿವಾಹವಾಯಿತು. ವಿವಾಹದ ಸಂದರ್ಭದಲ್ಲಿ ಆಕೆಯ ಹೆಸರನ್ನು ಲಕ್ಷ್ಮೀಬಾಯಿ ಎಂದು ಬದಲಾಯಿಸಲಾಯಿತು.

ರಾಣಿ ಲಕ್ಷ್ಮೀಬಾಯಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಳು. ಪುತ್ರನ ಜನನದಿಂದ ಅಧಿಕಾರಕ್ಕೆ ವಾರಸುದಾರ ಸಿಕ್ಕನೆಂದು ಗಂಗಾಧರರಾವ್ ಗೆ ತುಂಬಾ ಆನಂದವಾಯಿತು. ಆದರೆ ಮಗು ಮೂರು ತಿಂಗಳಿರುವಾಗಲೇ ಅಸುನೀಗಿತು. ಹಾಗಾಗಿ ರಾಣಿ ಲಕ್ಷ್ಮೀಬಾಯಿ ಮತ್ತು ಗಂಗಾಧರರಾವ್ ಇವರು ಪುತ್ರವಿಯೋಗ ಅನುಭವಿಸಬೇಕಾಯಿತು. ಪುತ್ರವಿಯೋಗವನ್ನು ಸಹಿಸದೆ ಗಂಗಾಧರರಾವ್ ಹಾಸಿಗೆ ಹಿಡಿದರು. ಗಂಗಾಧರರಾವ ಅವರ ಇಚ್ಛೆಯಂತೆ ವಾರಸುದಾರನಾಗಿ ನೆವಾಳಕರ ವಂಶದ ಆನಂದರಾವನನ್ನು ದತ್ತು ಪಡೆದು ಅವನಿಗೆ ದಾಮೋದರರಾವ್ ಎಂದು ಹೆಸರಿಟ್ಟರು. ದತ್ತು ಪಡೆದ ನಂತರ ಕೆಲವು ಸಮಯದಲ್ಲೇ ಗಂಗಾಧರರಾವ್ ಮರಣ ಹೊಂದಿದರು. ಪತಿ ವಿಯೋಗದಿಂದ ರಾಣಿಲಕ್ಷ್ಮೀಬಾಯಿಯು 18 ವರ್ಷದಲ್ಲೇ ವಿಧವೆಯಾದರು.

ಲಕ್ಷ್ಮೀಬಾಯಿ ಕುದುರೆ ಸವಾರಿ, ಕತ್ತಿವರಸೆ, ಬಿಲ್ವಿದ್ಯೆ ಮುಂತಾದುವನ್ನು ಕಲಿತು ತನ್ನ ಗೆಳತಿಯರನ್ನು ಜೊತೆಗೂಡಿ ಚಿಕ್ಕ ಸೈನ್ಯವನ್ನೇ ಕಟ್ಟಿದರು. ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವೀರ ಮಹಿಳೆ ರಾಣಿ ಲಕ್ಷ್ಮಿಬಾಯಿ. ಅದಾಗಲೇ ಈಸ್ಟ್ ಇಂಡಿಯಾ ಕಂಪನಿ ಭಾರತವನ್ನು ಸ್ವಾಧೀನ ಪಡಿಸಿಕೊಂಡಿತ್ತು. ಅದಲ್ಲದೆ ಭಾರತದ ಒಗ್ಗಟ್ಟು ಎಷ್ಟರ ಮಟ್ಟಿಗೆ ಇದೆ ಎಂಬುವುದನ್ನು ಕೂಡಾ ನೋಡಿದ್ದರು. ಇದು ಭಾರತದ ನೆಲವಾದರೂ ಸಹ ಯಾರಲ್ಲೂ ಒಗ್ಗಟ್ಟಿಲ್ಲ ಎಂಬುವುದು ಬ್ರಿಟಿಷರಿಗೆ ಸ್ಪಷ್ಟವಾಗಿ ಗೊತ್ತಿತ್ತು. ಇದನ್ನೇ ಲಾಭ ಮಾಡಿಕೊಂಡು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಮುಂದಾಗಿದ್ದರು.

ನನ್ನ ಝಾನ್ಸಿಯನ್ನು ನಾನು ಎಂದಿಗೂ ಕೊಡುವುದಿಲ್ಲ ಎಂದ ಝಾನ್ಸಿ ರಾಣಿ!!

ಆಂಗ್ಲರು ಹೊರಡಿಸಿದ ಹೊಸ ಆಜ್ಞೆಗನುಸಾರ ರಾಜ್ಯದ ಉತ್ತರಾಧಿಕಾರಿಯಾಗಿ ರಾಜನ ದತ್ತು ಪುತ್ರನಿಗೆ ಮಾನ್ಯತೆ ಇರಲಿಲ್ಲ. ಈ ಆಜ್ಞೆಯ ಕುರಿತು ರಾಣಿ ಲಕ್ಷ್ಮೀಬಾಯಿಗೆ ತಿಳಿಸಲು ಆಂಗ್ಲ ಅಧಿಕಾರಿ ಮೇಜರ ಎಲಿಸ ಭೇಟಿಯಾಗಲು ಬಂದನು. ರಾಣಿಗೆ ಸ್ವಂತ ಮಕ್ಕಳಿಲ್ಲದ ಕಾರಣ ಝಾನ್ಸಿಯನ್ನು ತಾವು ವಶಪಡೆಸಿಕೊಳ್ಳುವುದಾಗಿ ತಿಳಿಸಿದನು. ರಾಣಿಯು ಸಂತಾಪದಿಂದ ದುಃಖಿತಳಾದಳು ಆದರೆ ಮರುಕ್ಷಣವೇ ಸಿಂಹಿಣಿಯಂತೆ ಘರ್ಜಿಸುತ್ತಾ “ನನ್ನ ಝಾನ್ಸಿಯನ್ನು ನಾನು ಎಂದಿಗೂ ಕೊಡುವುದಿಲ್ಲ” ಎಂದು ಗರ್ಜಿಸಿದಳು! ಇದನ್ನು ಕೇಳಿದ ಮೇಜರ ಎಲಿಸನು ಭಯಭೀತನಾಗಿ ಬರಿಗೈಯಲ್ಲಿ ಹಿಂತಿರುಗಿದನು.

1857ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಯಿತು ಇದು ಭಾರತದೆಲ್ಲೆಡೆ ಹರಡಿತ್ತು!! ಇದೇ ಸಮಯದಲ್ಲಿ ಬ್ರಿಟಿಷರಿಗೆ ದೇಶದ ಇತರೆ ಪ್ರದೇಶಗಳ ಬಗ್ಗೆ ಹೆಚ್ಚು ಜಾಗರೂಕರಾಗಬೇಕಾದ್ದರಿಂದಾಗಿ ಝಾನ್ಸಿಯನ್ನು ರಾಣಿ ಲಕ್ಷ್ಮೀಬಾಯಿಯವರ ಆಳ್ವಿಕೆಗೆ ಬಿಟ್ಟರು. ಇದೇ ಸಮಯದಲ್ಲಿ ರಾಣಿ ಲಕ್ಷ್ಮೀಬಾಯಿಯ ಶ್ರೇಷ್ಠತೆಯು ರುಜುವಾತಾಯಿತು. ರಾಣಿ ಲಕ್ಷ್ಮೀಬಾಯಿಯವರ ನಾಯಕತ್ವದಲ್ಲಿ ಝಾನ್ಸಿಯಲ್ಲಿ ಶಾಂತಿ ಹಾಗು ನೆಮ್ಮದಿ ನೆಲೆಸಿ ಅವರೊಬ್ಬ ಉತ್ತಮ ನಾಯಕಿ ಎಂದು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಸಹಿತ ಝಾನ್ಸಿಯ ಪ್ರಜೆಗಳ ಮನದಲ್ಲಿ ನೆಲೆಸಿದರು.

ಶರಣಾಗದೆ ಉಗ್ರ ಹೋರಾಟ ಮಾಡಿದ್ದರು ಆ ನಿಷ್ಠಾವಂತ ಸೈನಿಕರು!!

ಆದರೆ ಸರ್ ಹ್ಯೂ ರೋಜ್ ಅವರ ನೇತ್ರತ್ವದ ಸೈನ್ಯ ಝಾನ್ಸಿಯನ್ನು 28 ಮಾರ್ಚ್ 1858ರಂದು ಮುತ್ತಿಗೆ ಹಾಕ್ಕಿದ್ದರಿಂದ ರಾಣಿ ಲಕ್ಷ್ಮೀಬಾಯಿಯವರ ಬ್ರಿಟಿಷರ ಬಗೆಗಿನ ನಿಲುವು ಬದಲಾಯಿತು. ರಾಣಿ ಲಕ್ಷ್ಮೀಬಾಯಿ ಹಾಗೂ ಅವರ ನಿಷ್ಠಾವಂತ ಸೈನಿಕರು ಶರಣಾಗಲು ಒಪ್ಪಲಿಲ್ಲ. ಎರಡು ವಾರಗಳವರೆಗೆ ಉಗ್ರ ಹೊರಾಟ ನಡೆಸಿದರು. ರಾಣಿ ಲಕ್ಷ್ಮೀಬಾಯಿ ಸ್ವತಃ ಸೈನಿಕರ ನಡುವಿನಲ್ಲಿ ಪುರುಷ ವೇಷಧಾರಿಯಂತೆ ಓಡಾಡಿಕೊಂಡು ಅವರನ್ನು ಹುರಿದುಂಬಿಸಿ ಬಹಳ ದಿಟ್ಟತನದಿಂದ ಹೋರಾಡಿದಳು. ಗ್ವಾಲಿಯರ್ ಅನ್ನು ವಶಪಡಿಸಿಕೊಂಡಳು.

ಗ್ವಾಲಿಯರನ್ನು ರಾಣಿ ಗೆದ್ದ ಸುದ್ದಿ ಸರ್ ಹ್ಯೂ ರೋಜ್ಗೆ ತಲುಪಿತು. ಇನ್ನು ಸಮಯ ವ್ಯರ್ಥ ಮಾಡಿದರೆ ಆಂಗ್ಲರು ನಾಶವಾಗುವುದೆಂದು ಅರಿತು, ಅವನು ತನ್ನ ಸೈನ್ಯವನ್ನು ಗ್ವಾಲಿಯರನ ಕಡೆ ತಿರುಗಿಸಿದನು. ಜೂನ್ 16ರಂದು ಆಂಗ್ಲರ ಸೈನ್ಯವು ಗ್ವಾಲಿಯರ ತಲುಪಿತು. ರಾಣಿ ಲಕ್ಷ್ಮೀಬಾಯಿ ಮತ್ತು ಪೇಶ್ವೆಯವರು ಸರ್ ಹ್ಯೂ ರೋಜ್ನನ್ನು ಎದುರಿಸಲು ಸಿದ್ಧರಾದರು. ಗ್ವಾಲಿಯರನ ಪೂರ್ವ ಭಾಗವನ್ನು ರಕ್ಷಿಸುವ ಸಂಪೂರ್ಣ ಹೊಣೆಯನ್ನು ರಾಣಿ ತನ್ನ ಮೇಲೆ ಹೊತ್ತಳು. ಯುದ್ಧದಲ್ಲಿ ಲಕ್ಷ್ಮೀಬಾಯಿಯ ಧೈರ್ಯ ನೋಡಿ ಸೈನಿಕರಿಗೆ ಸ್ಫೂರ್ತಿ ಸಿಕ್ಕಿತು. ರಾಣಿಯ ಸೇವಕಿಯರಾದ ಮಂದಾರ ಮತ್ತು ಕಾಶಿಯೂ ಪುರುಷರ ವೇಷ ಧರಿಸಿ ಯುದ್ಧ ಮಾಡಲು ಬಂದರು. ರಾಣಿಯ ಶೌರ್ಯದಿಂದಾಗಿ ಆ ದಿನ ಆಂಗ್ಲರು ಪರಾಭವ ಹೊಂದಬೇಕಾಯಿತು.

ಗಂಗಾಜಲವನ್ನು ಕುಡಿದೇ ಕೊನೆಯುಸಿರೆಳೆದ ಝಾನ್ಸಿ ರಾಣಿ ಲಕ್ಷ್ಮೀಬಾಯಿ..

ಹೌದು, ಜೂನ್ 18 ರಂದು ರಾಣೀ ಲಕ್ಷ್ಮೀಬಾಯಿಯ ಶೌರ್ಯದಿಂದ ಹತಾಶರಾದ ಆಂಗ್ಲರು ಗ್ವಾಲಿಯರನ್ನು ಎಲ್ಲ ದಿಕ್ಕುಗಳಿಂದ ಒಟ್ಟಿಗೆ ಆಕ್ರಮಿಸಿದರು. ಆಗ ರಾಣಿಯು ಆಂಗ್ಲರಿಗೆ ಶರಣಾಗದೆ ಅವರನ್ನು ಬೇಧಿಸಿ ಹೊರಗೆ ಹೋಗಲು ನಿರ್ಧರಿಸಿದಳು. ಶತ್ರುಗಳನ್ನು ಬೇಧಿಸಿ ಹೊರಹೋಗುವಾಗ ಒಂದು ನೀರಿನ ಪ್ರವಾಹ ನಡುವೆ ಬಂದಿತು. ರಾಣಿಯ ಬಳಿ ಯಾವಾಗಲೂ ಇರುವ ಕುದುರೆ ‘ರಾಜರತ್ನ’ ಇರದ ಕಾರಣ ಮತ್ತೊಂದು ಕುದುರೆಯ ಜೊತೆ ರಾಣಿಯು ಯುದ್ಧಕ್ಕೆ ಇಳಿದಿದ್ದಳು. ಆ ಕುದುರೆಗೆ ನೀರಿನ ಪ್ರವಾಹ ದಾಟಲು ಸಾಧ್ಯವಾಗದೆ ಅಲ್ಲಿಯೇ ಸುತ್ತಲೂ ಶುರುಮಾಡಿತು. ಮುಂದೇನಾಗಬಹುದೆಂದು ಅರಿತ ರಾಣಿ ತನ್ನನ್ನು ಬೆಂಬತ್ತಿ ಬರುತ್ತಿದ್ದ ಸೈನ್ಯವನ್ನು ಎದುರಿಸಿದಳು. ಆಕೆಗೆ ಬಿದ್ದ ಹೊಡೆತದಿಂದಾಗಿ ರಕ್ತಸಿಕ್ತಳಾಗಿ ಕೆಳಗೆ ಬಿದ್ದಳು. ಪುರುಷರ ವೇಷ ಧರಿಸಿದ್ದ ಕಾರಣ ಸೈನಿಕರಿಗೆ ಅದು ರಾಣಿ ಎಂಬುದು ತಿಳಿಯಲಿಲ್ಲ. ಹಾಗಾಗಿ ಅವಳು ಬಿದ್ದ ತಕ್ಷಣ ಆಂಗ್ಲರು ಹೊರಟು ಹೋದರು. ರಾಣಿಯ ಸೇವಕರು ಆಕೆಯನ್ನು ಸಮೀಪವಿದ್ದ ಗಂಗಾದಾಸರ ಮಠಕ್ಕೆ ಕರೆದುಕೊಂಡು ಹೋದರು ಮತ್ತು ಆಕೆಗೆ ಗಂಗಾಜಲವನ್ನು ನೀಡಿದರು. ತನ್ನ ಶರೀರ ಆಂಗ್ಲರ ಕೈಗೆ ಸಿಗಬಾರದೆಂಬ ಇಚ್ಛೆಯನ್ನು ವ್ಯಕ್ತಪಡಿಸಿ ರಾಣಿಯು ವೀರಮರಣವನ್ನಪ್ಪಿದಳು. ಹೀಗೆ ವೀರಾ ಪರಾಕ್ರಮಿಗಳು ತನ್ನ ದೇಶಕ್ಕಾಗಿ ಹೋರಾಡಿದ ಪರಿಣಾಮವಾಗಿ ಇಂದು ನಾವು ಸಂತೋಷದಿಂದ ಜೀವಿಸುತ್ತಿದ್ದೇವೆ.

Be the first to comment