ಧರ್ಮ ರಕ್ಷಣೆಗಾಗಿ ಹೋರಾಟ ಮಾಡಿದ ಶಿವಾಜಿ ಮಹಾರಾಜರ ಹಿಂದಿರುವ ಮಹಿಳಾ ಶಕ್ತಿ ಯಾರು ಗೊತ್ತಾ?

ಶಿವಾಜಿ ಮಹಾರಾಜರ ಜೀವನಕ್ಕೆ ಆಧಾರ ರೂಪವಾಗಿ, ಸಂಸ್ಕಾರ ಕೊಟ್ಟು ತ್ಯಾಗ ಮಾಡಿ ವೀರತ್ವವನ್ನು ಜಾಗೃತಗೊಳಿಸಿ ಇತಿಹಾಸ ನಿರ್ಮಾಣ ಮಾಡುವ ಕಾರ್ಯದಲ್ಲಿ ಅತ್ಯಂತ ಹಿರಿಯದಾದ ಪಾತ್ರ ವಹಿಸಿ ಇಡೀ ಮಾತೃವರ್ಗಕ್ಕೆ ಆದರ್ಶ ಮಾತೆಯಾಗಿ ಮೆರೆದ ವೀರ ಮಹಿಳೆ ಬೇರಾರು ಅಲ್ಲ ಆಕೆಯೇ ಜೀಜಾಬಾಯಿ. ಭಾರತೀಯರ ಸ್ವರಾಜ್ಯಕ್ಕಾಗಿ ಶಿವಾಜಿಗೆ ಪ್ರೇರಣೆಯಿತ್ತವಳು ಈಕೆ. ತಮ್ಮ ಮನಸ್ಸಿನಲ್ಲಿದ್ದ ಹಿಂದವೀ ಸ್ವರಾಜ್ಯದ ಸಂಕಲ್ಪನೆಯನ್ನು ಪ್ರತ್ಯಕ್ಷವಾಗಿ ಜಾರಿಗೆ ತರಲು ಛತ್ರಪತಿ ಶಿವಾಜಿಗೆ ಜ್ಞಾನ, ಚಾರಿತ್ರ್ಯ, ಚಾತುರ್ಯ, ಸಂಘಟನೆ ಹಾಗೂ ಪರಾಕ್ರಮ ಮುಂತಾದ ಸಾತ್ವಿಕ ಮತ್ತು ರಜೋಗುಣಗಳ ಅಮೃತಪಾನ ನೀಡುವ ರಾಜಮಾತೆ ಜೀಜಾಬಾಯಿಯ ಬಗ್ಗೆ ಪ್ರತೀಯೊಬ್ಬ ಭಾರತೀಯನೂ ತಿಳಿದುಕೊಳ್ಳಲೇ ಬೇಕು.

ಎಂತಹ ಕಷ್ಟ ಬಂದರೂ ಎದೆಗುಂದಿಲ್ಲ ಈ ಜೀಜಾಬಾಯಿ…

ಜನವರಿ 12 1598ರಲ್ಲಿ ಜನನವಾದ ಜೀಜಾಬಾಯಿ ತಂದೆ ಲಖೋಜಿ ರಾವ್ ಜಾಧವ್ ತಾಯಿ ಮಾಳಸಬಾಯಿ.. ಅವರ ಮುದ್ದಿನ ಮಗಳಾಗಿ ಸದ್ವಿದ್ಯೆ ಬುದ್ದಿಗಳನ್ನು ಪಡೆದು ಬೆಳೆದ ಚಾಣಾಕ್ಷೆ ಸುಂದರಿ ಜೀಜಾಬಾಯಿ… ಬಾಲ್ಯದಲ್ಲಿಯೇ ಜೀಜಾಬಾಯಿ ತಂದೆಯ ಜೊತೆಗೂಡಿ ರಾಜಶಾಸ್ತ್ರ ವಿದ್ಯೆಯ ಬಗ್ಗೆ ಜ್ಞಾನ ಪಡೆದಳು.. ತಾಯಿಯಿಂದ ಭಕ್ತಿ, ಭಾವ , ಎಲ್ಲಾ ಸಂಸ್ಕಾರಗಳನ್ನು ಕಲಿಯುತ್ತನೇ ದೊಡ್ಡವಳಾದಳು. ಆಕೆಯನ್ನು ಕಂಡರೆ ಎಲ್ಲರಿಗೂ ಅತ್ಯಂತ ಗೌರವ.. ಇಡೀ ಮಾತೃವರ್ಗಕ್ಕೆ ಆದರ್ಶ ಮಾತೆಯಾಗಿ ಮೆರೆದ ವೀರ ಮಹಿಳೆ ಜೀಜಾಬಾಯಿ ಎಂದರೆ ಆಕೆ ಒರ್ವ ಆತ್ಮಗೌರವದ ಮೂರ್ತಿ ಎಂತಹ ಕಷ್ಟಗಳೇ ಬರಲಿ ಎದೆಗುಂದದೆ ಎಂತಹ ಪ್ರಸಂಗವನ್ನೂ ಎದುರಿಸುವ ಧೈರ್ಯಶಾಲಿ.

ಜೀಜಾಬಾಯಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು

ಅವರ ಮುದ್ದಿನ ಮಗಳಾಗಿ ಸದ್ವಿದ್ಯೆ ಬುದ್ಧಿಗಳನ್ನು ಪಡೆದು ಬೆಳೆದ ಚಾಣಾಕ್ಷೆ ಸುಂದರಿ ಜೀಜಾಬಾಯಿ ಕರ್ತೃತ್ವವಂತ ತಂದೆಯ ಪರಾಕ್ರಮದ ಉದಾಹರಣೆಗಳನ್ನು ತೊಟ್ಟಿಲಲ್ಲಿರುವಾಗಲೇ ಜಿಜಾಬಾಯಿ ಬೆರಗಾಗಿ ಕೇಳುತ್ತಿದ್ದರು. ಬೆಳೆಯುತ್ತಲೇ ಅಸಹಾಯಕತೆ ಮತ್ತು ಅವಿಶ್ವಾಸ ಎಂಬ ರೋಗಗಳನ್ನು ಅವರು ಮನಸಾರೆ ತಿರಸ್ಕಾರ ಮಾಡಲು ಮುಂದಾದರು.
ತನ್ನ ಮಕ್ಕಳಾಟಿಕೆ ಸಮಯದಲ್ಲಿ, ಗೊಂಬೆಗಳ ಆಟಿಕೆಯ ಸಂಸಾರದಲ್ಲಿ ಮುಳುಗಿರಬೇಕಾದ ಸಮಯದಲ್ಲಿ, ಜೀಜಾಬಾಯಿ ಕತ್ತಿಯನ್ನು ಬಿಗಿಯಾಗಿ ಹಿಡಿದು ಕತ್ತಿವರಸೆಯಲ್ಲಿ ಪರಿಣತಿ ಸಾಧಿಸುವುದರಲ್ಲಿ ಮಗ್ನರಾಗಿದ್ದ ಇವರು ಬಾಲ್ಯದಲ್ಲಿಯೇ ವಿದ್ಯಾವಂತೆ. ಆಕೆ ಕೇವಲ ಲಖೋಜಿಯ ಮುದ್ದಿನ ಮಗಳಾಗಿ ಬೆಳೆದಿಲ್ಲ. ಬದಲಾಗಿ ಇಡೀ ಬುಲ್ಧಾನ್ ಜಿಲ್ಲೆಯ ಮುದ್ದಿನ ಮಗಳಾಗಿ ಬೆಳೆದಳು.

ಈಕೆಯ ಜೀವನ ಶೈಲಿಯೇ ಬಹಳ ವೀರತೆಯಿಂದ ಕೂಡಿತ್ತು.

ಆದರೆ ದೇಶದಲ್ಲಿ ಅಂದಿದ್ದ ಪರಿಸ್ಥಿತಿ ಹೇಗಿತ್ತೆಂದರೆ ಜನರು ಗುಲಾಮರಾಗಬೇಕು, ಮುಸಲ್ಮಾನ ಸಾಮ್ರಾಜ್ಯದಲ್ಲಿ ಹಿಂದೂಗಳು ಅಡಿಯಾಳಾಗಬೇಕು ಹಾಗೂ ಸನ್ಮಾನವುಳ್ಳ, ಸಂಸ್ಥಾನಿಕರಾಗಬೇಕಿತ್ತು. ಶತ್ರು ಸರದಾರರು ಅಕ್ಕ-ತಂಗಿಯರ ಮಾನಭಂಗ ಮಾಡುತ್ತಿದ್ದರು. ಹೆಣ್ಣು ಮಕ್ಕಳ ಹರಾಜು ನಡೆಯುತ್ತಿತ್ತು. `ಸ್ವಾತಂತ್ರ್ಯ ಎಂದರೇನು’ ಎಂಬುದನ್ನೇ ಮರೆತು ಹೋದ ಸಮಾಜವು ಮೂಕವಾಗಿ ಅತ್ಯಾಚಾರಗಳನ್ನು ಸಹಿಸುತ್ತಿತ್ತು. ಅನ್ನದಾತ ರೈತನ ಸ್ಥಿತಿಯು ಅತ್ಯಂತ ದಯನೀಯವಾಗಿತ್ತು. ಬೆವರು ಸುರಿಸಿ ಮೈ ಮುರಿದು ದುಡಿದರೂ ತುತ್ತು ಅನ್ನಕ್ಕೆ ಪರದಾಡುವ ಸ್ಥಿತಿ ಎದುರಾಗಿದ್ದಾಗ ಜೀಜಾಬಾಯಿಗೆ ಅದನ್ನೆಲ್ಲ ಸಹಿಸಲು ಆಗುತ್ತಿರಲಿಲ್ಲ. ಜೀಜಾಬಾಯಿಯ ಜೀವನ ಶೈಲಿಯೇ ಬಹಳ ವೀರತೆಯಿಂದ ಕೂಡಿದ್ದಲ್ಲದೇ ದೇಶದ ಜನರು ಗುಲಾಮಗಿರಿಯ ಬೇಗೆಯಲ್ಲಿ ಬೇಯುತ್ತಿದ್ದಾಗ ಅದರ ನಿರ್ಮೂಲನೆಯ ಕನಸನ್ನು ಹೊತ್ತಿದ್ದಳು.

ಪರಾಕ್ರಮಿ, ಸ್ವರಾಜ್ಯ ಸ್ಥಾಪಿಸಲು ಸಾಮಥ್ರ್ಯವುಳ್ಳ ಪುತ್ರನನ್ನು ನನಗೆ ದಯಪಾಲಿಸು ಎಂದು ಭವಾನಿ ಮಾತೆಯಲ್ಲಿ ಮೊರೆಯಿಟ್ಟಿದ್ದಳು.

ಜೀಜಾಬಾಯಿ 1605 ರಲ್ಲಿ ಶಹಾಜಿ ಭೋಸಲೆಯ ಪಟ್ಟದರಸಿಯಾದರು. ಮದುವೆಯಾಗಿ ಕೆಲವು ಸಮಯಗಳು ಕಳೆದರೂ ಕೂಡ ಜೀಜಾಬಾಯಿಗೆ ಕನಸಿನ ಹಿಂದವೀ ಸಾಮ್ರಾಜ್ಯದ ಸೂರ್ಯ ಕಾಣುತ್ತಿರಲಿಲ್ಲ. ಕೊನೆಯಲ್ಲಿ ಅವರು ಭವಾನಿ ಮಾತೆಯಲ್ಲಿ ಹರಕೆಹೊತ್ತರಲ್ಲದೇ, “ತೇಜಸ್ವಿ, ಪರಾಕ್ರಮಿ, ಸ್ವರಾಜ್ಯ ಸ್ಥಾಪಿಸಲು ಸಾಮಥ್ರ್ಯವುಳ್ಳ ಪುತ್ರನನ್ನು ನನಗೆ ದಯಪಾಲಿಸು” ಎಂದು ಮೊರೆ ಇಟ್ಟರು. ಪರಾಕ್ರಮಿ ಶಹಾಜಿರಾಜರ ಕುಂದು ಕೊರತೆಗಳನ್ನು ಜೀಜಾಬಾಯಿ ಸಮೀಪದಲ್ಲಿದ್ದು ಅನುಭವಿಸುತ್ತಿದ್ದರು. ಅವರು ಆದಿಲ್ ಶಾಹ, ನಿಜಾಮಶಾಹ, ಮೊಘಲ್ ಮುಂತಾದ ಶಾಹಗಳ ವಿರುದ್ಧ ಪರಾಕ್ರಮಗಳನ್ನು ಪ್ರದರ್ಶಿಸಿದ್ದರೂ ಕೂಡ ಅವರಿಗಿದ್ದದ್ದು ದ್ವಿತೀಯ ದರ್ಜೆಯ ಸ್ಥಾನಮಾನ ಎಂಬುವುದು ಜೀಜಾಬಾಯಿಯ ಗಮನಕ್ಕೆ ಬರುತ್ತಿತ್ತು. ಅದು ಅಧಿಕಾರವಿದ್ದರೂ, ಅಲ್ಲಿ ಸ್ಥಾನ ಮಾನವಿರಲಿಲ್ಲ, ಸ್ಥಿರತೆ ಇರಲಿಲ್ಲ, ರೈತರ ಕಲ್ಯಾಣವಿರಲಿಲ್ಲ, ಇವುಗಳ ಬಗ್ಗೆ ಜೀಜಾಬಾಯಿಗೆ ಅರಿವಾಗುತ್ತಿತ್ತು. ಆದರೆ ಮಗುವಿನ ಜನನಕ್ಕಿಂತ ಮೊದಲು ಮಗುವಿನ ಜೀವನದ ಧ್ಯೇಯವನ್ನು ನಿಶ್ಚಯಿಸುವ ತಾಯಂದಿರು ಈ ಸಮಾಜದಲ್ಲಿ ಎಷ್ಟಿರಬಹುದು, ಆ ದೇವರೇ ಬಲ್ಲ! ಅಂತಹ ತಾಯಿ ಜೀಜಾಬಾಯಿಯಾದಳು.

ದೇಶದಲ್ಲಿ ತುಂಬಿದ್ದ ಅಕ್ರಮ ಅನಾಚಾರಗಳನ್ನು ಹೊಡೆದೊಡೆಸಲು ಪಣತೊಟ್ಟಿದ್ದ ವೀರಮಾತೆಯೂ ಶಿವಾಜಿಯಂತಹ ಪರಾಕ್ರಮಶಾಲಿಗೆ ಜನ್ಮವಿತ್ತರು. ಆರಂಭದಿಂದಲೇ ಶಿವಾಜಿಗೆ ಜೀಜಾಬಾಯಿಯು ವೀರ ಸಾಹಸ ಕಥೆಗಳನ್ನು ಹೇಳುತ್ತಿದ್ದರಲ್ಲದೇ ಸೀತೆಯ ಅಪಹರಣ ಮಾಡಿದ ದುಷ್ಟ ರಾವಣನನ್ನು ವಧಿಸಿದ ರಾಮನು ಎಷ್ಟು ಪರಾಕ್ರಮಿಯಾಗಿದ್ದನು, ಬಕಾಸುರನನ್ನು ವಧಿಸಿ ದುರ್ಬಲ ಜನರನ್ನು ಮುಕ್ತಗೊಳಿಸುವ ಭೀಮನು ಎಷ್ಟು ಪರಾಕ್ರಮಿಯಾಗಿದ್ದನು.. ಹೀಗೆ ಪ್ರತಿಯೊಂದು ಕಥೆಯಲ್ಲಿ ಅವರು ಪರಾಕ್ರಮಿ ಪುರುಷನಿಗೆ ಭಗವಂತನ ಸ್ಥಾನವನ್ನು ನೀಡಿದರು. ಅಲ್ಲದೇ ಸ್ವಾತಂತ್ರ್ಯಕ್ಕೆ ಧ್ಯೇಯದ ಸ್ಥಾನವನ್ನೂ ನೀಡಿದರು.

ಭಾರತೀಯರ ಸ್ವರಾಜಕ್ಕಾಗಿ ತನ್ನ ಮಗ ಶಿವಾಜಿಗೆ ಪ್ರೇರಣೆಯಿತ್ತಳು ಈ ಪುಣ್ಯಾತಗಿತ್ತಿ..

ಜೀಜಾಬಾಯಿಯ ಮಗ ಶಿವಾಜಿ, ತಾಯಿಯ ಪೆÇ?ಷಣೆ ಹಾಗು ಮಾರ್ಗದರ್ಶನದಲ್ಲಿಯೇ ಬೆಳೆದರು. ಭಾರತದ ಗಡಿಯಾಚೆಯಿಂದ ನುಗ್ಗಿದ ಕಟುಕ ದರೋಡೆಕೋರರನ್ನು ಜೀಜಾಬಾಯಿ ನೋಡಿದ್ದಳು. ಇಲ್ಲಿ ರಾಜ್ಯ ಸ್ಥಾಪಿಸಿ, ಇಲ್ಲಿಯ ಜನತೆಯನ್ನು ಹಿಂಡುತ್ತಿದ್ದಂತಹ, ಇಲ್ಲಿಯ ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದಂತಹ ವಿದೇಶಿ ದಾಳಿಕಾರರ ಅಡಿಯಲ್ಲಿಯೇ ಅವಳ ತಂದೆ ಹಾಗು ಅವಳ ಗಂಡ ಊಳಿಗ ಮಾಡುತ್ತಿದ್ದರು. ನಾಡ ಜನತೆಯ ಮೇಲೆ ನಡೆಯುವ ದಬ್ಬಾಳಿಕೆಯನ್ನು ಪ್ರತ್ಯಕ್ಷವಾಗಿ ಕಂಡ ಜೀಜಾಬಾಯಿ ಈ ನಾಡವರ ರಾಜ್ಯಕ್ಕಾಗಿ, ಭಾರತೀಯರ ಸ್ವರಾಜಕ್ಕಾಗಿ ತನ್ನ ಮಗ ಶಿವಾಜಿಗೆ ಪ್ರೇರಣೆ ಇತ್ತಳು. ಶಿವಾಜಿಯ ಜನ್ಮದೊಂದಿಗೆ ಹಿಂದವೀ ಸ್ವರಾಜ್ಯದ ಅಡಿಪಾಯ ಹಾಕಿದಂತಾಗಿತ್ತು.

ಶಿವಾಜಿಯ ಮನಸ್ಸಿನಲ್ಲಿ ಕರ್ತೃತ್ವದ ಕಿಡಿಯನ್ನು ಹಚ್ಚಿದ ಜಿಜಾಬಾಯಿ ಅವರಿಗೆ ರಾಜನೀತಿಯನ್ನು ಕೂಡ ಕಲಿಸಿದರು. ಸಮಾನ ನ್ಯಾಯವನ್ನು ನೀಡುವ ವೃತ್ತಿ ಹಾಗೂ ಅನ್ಯಾಯ ಮಾಡುವವರಿಗೆ ಕಠೋರ ಶಿಕ್ಷೆ ನೀಡುವ ಧೈರ್ಯವನ್ನು ನೀಡಿದರು. ಶಿವಾಜಿಯ ಶಸ್ತ್ರಾಸ್ತ್ರಗಳ ಪ್ರಶಿಕ್ಷಣದತ್ತ ಸ್ವತಃ ಸೂಕ್ಷ್ಮ ಗಮನ ನೀಡಿದರು. ಶಹಾಜಿರಾಜರ ಬಂಧನ ಹಾಗೂ ಬಂಧಮುಕ್ತಿ, ಅಫ್ಜಲ್ ಖಾನನ ತೊಂದರೆ, ಆಗ್ರಾದಿಂದ ಮುಕ್ತಿ ಹೀಗೆ ಅನೇಕ ಪ್ರಸಂಗಗಳಲ್ಲಿ ಶಿವಾಜಿಗೆ ಜೀಜಾಬಾಯಿಯ ಮಾರ್ಗದರ್ಶನ ಲಭಿಸಿತು. ಶಿವಾಜಿಯವರು ಮಹತ್ವವಾದ ಅಭಿಯಾನದಲ್ಲಿದ್ದಾಗ, ಜಿಜಾಬಾಯಿಯೇ ರಾಜ್ಯದ ಕಾರ್ಯಭಾರದತ್ತ ಗಮನ ನೀಡುತ್ತಿದ್ದರು.

ಶಿವಾಜಿ ಪರಾಕ್ರಮ ಕಂಡು ಶತ್ರುಗಳು ಗಡಗಡ…

ಶಿವಾಜಿಯು ತನ್ನ ಸ್ವರಾಜವನ್ನು ವಿಸ್ತರಿಸುತ್ತಾ ಹೋದಂತೆ, ವಿಜಯಪುರದ ಆದಿಲಶಾಹಿ ಚಿಂತಿತನಾಗುತ್ತಾನೆ. ಶಿವಾಜಿಯ ನಿಗ್ರಹಕ್ಕಾಗಿ ಆತ ಅಫ್ಜಲ್ ಖಾನನನ್ನು ಕಳಿಸಿಕೊಟ್ಟ. ಅಫ್ಘಾನ್ ಮೂಲದ ಈತ ಆದಿಲಶಾಹಿಯ ನೆಚ್ಚಿನ ಸೇನಾಪತಿಯಾಗಿದ್ದ ಈತ ಪುಣೆಯಲ್ಲಿ ಶಿವಾಜಿಯನ್ನು ಎದುರಿಸಿ, ಕೊಚ್ಚಿ ಹಾಕಲು ಅಫ್ಜಲ್ ಖಾನ್ ಬಯಸಿದ್ದ. ಆದರೆ ಶಿವಾಜಿ ಉದ್ದೇಶಪೂರ್ವಕವಾಗಿ ಪ್ರತಾಪಗಡಕ್ಕೆ ತೆರಳಿದ. ಅಫ್ಜಲ್ ಖಾನನ ಸೈನ್ಯ ಪ್ರತಾಪಗಡವನ್ನು ದೀರ್ಘ ಕಾಲದವರೆಗೆ ಮುತ್ತಿಗೆ ಹಾಕಿದರೂ ಏನೂ ಪ್ರಯೋಜನವಾಗಲಿಲ್ಲ.

ಕೊನೆಗೆ ಮೈತ್ರಿಯ ಒಪ್ಪಂದಕ್ಕೆ ಅಫ್ಜಲ್ ಖಾನ ತನ್ನ ದೂತನನ್ನು ಕಳುಹಿದನಲ್ಲದೆ, ಈ ಸಂದರ್ಭದಲ್ಲಿ ಶಿವಾಜಿಯು ಈ ಭೇಟಿಗೆ ಒಪ್ಪಿದ. ಇವರಿಬ್ಬರೂ ನಿಶ್ಶಸ್ತ್ರರಾಗಿ ಸಂಧಿಸಬೇಕು. ಜೊತೆಗೆ ಇಬ್ಬರು ಸಶಸ್ತ್ರ ಅಂಗರಕ್ಷಕರು ಮಾತ್ರ ಇರಬೇಕು ಎನ್ನುವ ಷರತ್ತಿನೊಡನೆ ಭೇಟಿಯಾಗುವ ಸಿದ್ಧತೆಗಳಾದವು. ಅಫ್ಜಲ್ ಖಾನ್ ಈ ಮೊದಲೊಮ್ಮೆ ಕಸ್ತೂರಿರಂಗ ಎನ್ನುವ ರಾಜನನ್ನು ಇಂತಹದೇ ನೆಪದಲ್ಲಿ ಮೋಸದಿಂದ ಕೊಂದಿದ್ದ. ಆದುದರಿಂದ ಶಿವಾಜಿಯ ಹಿತವರ್ಗದವರೆಲ್ಲರೂ ಈ ಭೇಟಿಗೆ ಒಪ್ಪದಿರಲು ಆತನಿಗೆ ಸಲಹೆ ನೀಡಿದರು. ಜೀಜಾಬಾಯಿ ಮಾತ್ರ ನಿರ್ಭೀತಿಯಿಂದಲೇ ಶಿವಾಜಿಗೆ ಸಮ್ಮತಿ ನೀಡಿದಳು.

ಜೀಜಾಬಾಯಿಯಂತಹ ವೀರಮಾತೆ ಎಲ್ಲರಿಗೂ ಆದರ್ಶ ಮೂರ್ತಿ…

ಭೇಟಿಗೆ ಹೋಗುವ ಮುಹೂರ್ತದಲ್ಲಿ ಶಿವಾಜಿಗೆ ಆರತಿ ಬೆಳಗಿ ತಿಲಕವನ್ನಿಡುವ ಸಂದರ್ಭದಲ್ಲಿ ಶಿವಾಜಿ ಹೆಂಡತಿಯ ಕೈ ಆರತಿ ಎತ್ತುವಾಗ ಕಂಪಿಸಿತು. ಆಗ ಜೀಜಾಬಾಯಿಯೇ ಆರತಿ ಎತ್ತಿ, ತಿಲಕವನ್ನಿತ್ತು, ಆಶೀರ್ವದಿಸಿ ಕಳುಹಿಸಿದಳು. ಕುಂತಿ ಏಕಚಕ್ರನಗರದ ಪ್ರಜೆಗಳ ಹಿತರಕ್ಷಣೆಗಾಗಿ ಭೀಮಸೇನನನ್ನು ಕಳೆದುಕೊಳ್ಳುವ ಅಪಾಯವನ್ನು ಹೇಗೆ ಎದುರಿಸಿದಳೋ, ಅದೇ ರೀತಿಯಲ್ಲಿ ಜೀಜಾಬಾಯಿಯೂ ಸಹ ಜನಹಿತರಕ್ಷಣೆಗಾಗಿ ತನ್ನ ಒಬ್ಬನೇ ಮಗ ಶಿವಾಜಿಯನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸಿದರು ಎನ್ನುವುದೇ ಹೆಮ್ಮೆಯ ವಿಚಾರ. ಇಂತಹ ವೀರಮಾತೆ ಎಲ್ಲರಿಗೂ ಆದರ್ಶ ಮೂರ್ತಿಯಾಗಿ ಎಲ್ಲರಿಗೂ ಮಾರ್ಗದರ್ಶಕರಾದರು.

ಬಾಲ್ಯದ ಸುಸಂಸ್ಕಾರಗಳ ಬಲದಲ್ಲಿ ಛತ್ರಪತಿ ಶಿವಾಜಿ ಸಾವಿರಾರು ವರ್ಷಗಳ ಗುಲಾಮಗಿರಿಯನ್ನು ಮುರಿದು ಹಾಕಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಪುತ್ರನ ಕರ್ತೃತ್ವದ ಮೇಲೆ ಕಾಲಕ್ಕೆ ತಕ್ಕಂತೆ ಮಾಯೆಯ ಪೆÇ?ರೀತ್ಸಾಹ ಮಾರ್ಗದರ್ಶನ ನೀಡುತ್ತ ಅವನು ಸಿಂಹಾಸನ ಏರುವವರೆಗೂ ಜಿಜಾಬಾಯಿ ಹೋರಾಡುತ್ತಿದ್ದರು. ರಾಯಗಡದ ಮೇಲೆ ಶಿವರಾಜ್ಯಾಭಿಷೇಕದ ಹನ್ನೆರಡು ದಿವಸಗಳ ನಂತರ 17 ಜೂನ್ 1674 ರಂದು ಅವರು ಸ್ವತಂತ್ರ ಹಿಂದವೀ ಸ್ವರಾಜ್ಯದಲ್ಲಿ ಕೊನೆಯುಸಿರು ಎಳೆದರು. ಇಂತಹ ಧೀರ ಮಾತೆಯ ಸಮಾಧಿಯೂ ರಾಯಗಡದ ಮಡಿಲಿನ ಪಾಚಾಡ ಎಂಬ ಊರಿನಲ್ಲಿ ಇಂದಿಗೂ ಕೂಡ ಜೀವಂತವಾಗಿದೆ.

ದೇಶ-ಧರ್ಮಗಳ ರಕ್ಷಕಿಯಾದ ಛತ್ರಪತಿ ಶಿವಾಜಿಯ ತಾಯಿ ಜೀಜಾಬಾಯಿ ಆತ್ಮಗೌರವದ ಜೀವಂತ ಮೂರ್ತಿಯಾಗಿದ್ದರು. ಎಷ್ಟೇ ಕಷ್ಟಗಳು ಬಂದರೂ ಅದನ್ನೆಲ್ಲಾ ಹೊಟ್ಟೆಗೆ ಹಾಕಿಕೊಂಡು ವೀರಪುತ್ರ ಶಿವಾಜಿ ಮಹಾರಾಜರಿಗೆ ಸ್ಫೂರ್ತಿಯಾದ ಮಹಾಮಾತೆಯು, ಶಹಾಜಿರಾಜರ ಅನುಪಸ್ಥಿತಿಯಲ್ಲಿ ಅವರು ಎರಡೂ ಭೂಮಿಕೆಗಳನ್ನು ಸಮರ್ಥವಾಗಿ ನಿರ್ವಹಿಸಿದಂತಹ ಚೈತನ್ಯಮಯಿಯಾಗಿದ್ದರು. ಹಿಂದವೀ ಸ್ವರಾಜ್ಯದ ಸ್ಥಾಪನೆಯ ಹಾದಿಯಲ್ಲಿ ಅಡ್ಡ ಬರುವ ಹೇಡಿಗಳ ಜೊತೆ ಹೋರಾಡುವ ಧೈರ್ಯವು ಶಹಾಜಿಯ ಪುತ್ರ ಶಿವಾಜಿಗೆ ಸಿಕ್ಕಿದ್ದು ಕೇವಲ ಜಿಜಾಬಾಯಿಯು ಬಿತ್ತಿದ `ಶೌರ್ಯದ’ ಸಂಸ್ಕಾರಗಳಿಂದ ಎನ್ನುವುದನ್ನು ನಾವು ಯಾವತ್ತೂ ಕೂಡ ಮರೆಯಬಾರದು. ಜೀಜಾಬಾಯಿ ಕಲಿಸಿದ ಈ ಸಂಸ್ಕಾರದಿಂದಾಗಿ ಮುಂದೆ ಶಿವಾಜಿ ಮಹಾರಾಜರು ಮೊಘಲರನ್ನೇ ಮಣ್ಣುಮುಕ್ಕಿಸಿದರು. ಹಿಂದೂ ಧರ್ಮದ ಉಳಿವಿಗಾಗಿ ಹೋರಾಟ ಮಾಡಿದ ವೀರ… ಇಂದಿಗೂ ಹಿಂದೂಗಳು ಶಿವಾಜಿ ಮಹಾರಾಜರು ಹೃದಯದ ಲ್ಲಿಟ್ಟು ಪೂಜಿಸುತ್ತಾರೆ ಇದೆಲ್ಲಾ ಜೀಜಾಬಾಯಿ ಕೊಟ್ಟ ಆದರ್ಶದಿಂದ….

Be the first to comment