ಐದನೇ ತರಗತಿಯ ಹೆಣ್ಣುಮಗಳ ಆತ್ಮಹತ್ಯೆಗೆ ಕಾರಣ ಈಗಿನ ಶಿಕ್ಷಣ ವ್ಯವಸ್ಥೆ ಹಾಗೂ ಶಾಲೆಗಳ ಅನಗತ್ಯ ನಿಯಮಗಳು

ಮಂಗಳೂರು ವಿಧ್ಯಾವಂತರ ನಾಡು,ಶಿಕ್ಷಣಕ್ಕೆ ಬಹಳ ಫೇಮಸ್ಸು ನಮಗೂ ಹೆಮ್ಮೆ ನಾವೂ ಇದೇ ಕರಾವಳಿಗರೇ..ತುಳುವಪ್ಪೆನ ಮೋಕೆದ ಜೋಕುಲು,ಗಡಿ ನಾಡಿನ ಕನ್ನಡಿಗರು,ಸರ್ವಧರ್ಮದ ಭಾವೈಕ್ಯತೆ ಸಾರುವ ನೆಲ ಎಂದೆಲ್ಲ ನಮ್ಮನ್ನು ನಾವೇ ಹೊಗಳಿಕೊಳ್ಳುವಾಗ ಹಾಗೂ ಇತರರು ಹೊಗಳುವ ಬಹಳ ಹೆಮ್ಮೆ ಅನಿಸುತ್ತದೆ.ಆದರೆ ಇತ್ತೀಚೆಗೆ ಚಿಕ್ಕ ಪುಟಾಣಿ ಹೆಣ್ಣುಮಗುವೊಂದು ಓದಲು ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಓದಿದಾಗ ಬಹಳ ಬೇಸರವೆನ್ನಿಸಿತು.ಜೀವನವೆಂದರೇನೆಂದೇ ತಿಳಿಯಲು ಸಾಧ್ಯವಾಗದ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡುತ್ತಿದೆಯೆಂದರೆ ಅದರ ಮನಸ್ಸಿನೊಳಗಡೆ ಶಾಲೆ ವಿಧ್ಯಾಭ್ಯಾಸ ಶಿಕ್ಷಣ ಪದ್ದತಿ ಎಂತಹ ಭಯಾನಕತೆಯನ್ನು ಹಾಗೂ ಗೊಂದಲ ಹೇರಿಕೆಗಳನ್ನು ಉಂಟುಮಾಡಿರಬಹುದಲ್ಲವೇ..??

ಬೆಳಗೆದ್ದು ಕೆಲಸಕ್ಕೆ ಹೋಗುವ ತಂದೆ ಆತುರವಾಗಿ ಅಡುಗೆ ಮಾಡಿ ಮಕ್ಕಳಿಗೆ ಟಿಫನ್ ಮಕ್ಕಳಿಗೆ ಬಟ್ಟೆ ಉಡಿಸಿ ಕಾಲಿಗೆ ಸಾಕ್ಸ್ ಬೆನ್ನಿಗೆ ಚೀಲ ನೇತಾಡಿಸಿ ಮನೆ ಹತ್ತಿರ ಬರುವ ಪ್ರೈವೇಟ್ ಶಾಲೆಯ ವಾಹನಕ್ಕೆ ಹತ್ತಿಸಿ ಟಾಟಾ ಬೈ ಬೈ ಎಂದು ಗಾಡಿ ಕಾಣುವಷ್ಟು ದೂರ ಕೈಬೀಸಿ ಎಲ್ಲರೆದುರು ನನ್ನ ಮಕ್ಕಳು ಓದುವುದು ಇಂಗ್ಲೀಷ್ ಶಾಲೆಯಲ್ಲಿ ಎನ್ನುವ ಗತ್ತು ತೋರಿಸುತ್ತಾರೆ ಹೆತ್ತವರು.

ಶಾಲೆ ಹತ್ತಿದ ಮಗುವಿನ ಮನಸ್ಥಿತಿಯನ್ನು ಅರಿಯುವ ಪ್ರಯತ್ನ ಓದುವ ಶಾಲೆಯಲ್ಲೂ ಅರ್ಥ ಮಾಡಿಕೊಳ್ಳುವವರಿಲ್ಲ ಯಾಕೆಂದರೆ ನಮ್ಮ ಶಾಲೆಯೇ ಫಸ್ಟ್ ರ್ಯಾಂಕ್ ಪಡೆದು ಮುಂದಿನ ವರ್ಷ ಸುಲಭವಾಗಿ ಶಾಲೆಯ ಹೊರಗೊಂಡು ಬೋರ್ಡ್ ಹಾಕಿಸಿದರೆ ಸಾಕು ಕ್ಲಾಸ್ ಫುಲ್ ಕೇಳಿದಷ್ಟೂ ಡೊನೇಷನ್,ವರ್ಷಕ್ಕೊಂದು ಹೊಸ ಹೊಸ ಕಟ್ಟಡ ನಿರ್ಮಾಣ ಆರಾಮಾಗಿ ಮಾಡಬಹುದೆನ್ನುವುದಷ್ಟೆ ಅವರ ಟಾರ್ಗೆಟ್.

ಇತ್ತ ತಂದೆ ತಾಯಿಯಿಬ್ಬರೂ ಮಕ್ಕಳ ಶಾಲೆಯ ಫೀಸ್ ಬರಿಸಲು ಒದ್ದಾಟ ಹೋರಾಟ ಚೀರಾಟ ತೊಳಲಾಟ ಮನೆಯಲ್ಲಿ ಆಗಾಗ ಜಗಳ,ಎಲ್ಲಿಲ್ಲಿ ಸಾಲ ಸಿಗುತ್ತದೋ ಅಲ್ಲೆಲ್ಲ ಸಾಲ.ಇಬ್ಬರೂ ದುಡಿಯುವದರಿಂದ ಕುಟುಂಬದೊಡನೆ ಬೆರೆಯಲು ಸಮಯವಿಲ್ಲ.ಮಕ್ಕಳು ಮಾರ್ಕ್ ಸ್ವಲ್ಪ ಕಡಿಮೆ ಮಾರ್ಕ್ ಪಡೆದರೆ ಸಾಕು ಇಬ್ಬರನ್ನೂ ಶಾಲೆಗೆ ಕರೆಸುವ ಶಾಲೆಗಳ ಸಿಬ್ಬಂದಿಗಳು ಅಲ್ಲಿ ಎಲ್ಲರೆದುರೂ ನಮ್ಮ ಮಕ್ಕಳು ಓದಲಿಲ್ಲವೆಂದರಿತಾಗ ನಾಚಿಕೆ,ಬೇರೆ ಪೋಷಕರೆದುರು ಅವಮಾನವಾಯಿತೆಂಬ ನೋವು ಇಷ್ಟು ಸಾಲ ಮಾಡಿ ಓದಿಸಿದರೂ ನೆಮ್ಮದಿಯಿಲ್ಲವೆಂಬ ಬೇಸರದಲ್ಲಿ ಮನೆಗೆ ಬಂದು ಮಕ್ಕಳಿಗೆ ಪೆಟ್ಟು ಬೈಗುಳ.

ಮಕ್ಕಳಿಗೆ ಆಟವಿಲ್ಲ,ಇತರರೊಂದಿಗೆ ಬೆರೆಯುವ ಅವಕಾಶವಿಲ್ಲ,ಸ್ವಾತಂತ್ರ್ಯ ಎನ್ನುವುದೇ ಇಲ್ಲ.ನಾವು ಚಿಕ್ಕಂದಿನಲ್ಲಿ ಆಡುತ್ತಿಲ್ಲ ಲಗೋರಿ ಕುಂಟಬಿಲ್ಲೆ ಕಬಡ್ಡಿ ಗೊತ್ತೇ ಇಲ್ಲ.ಮನರಂಜನೆಗೆ ಸಮಯ ಮೀಸಲಿಡಲು ಹೆತ್ತವರಿಗೆ ಸಮಯವಿಲ್ಲ ಮಗು ಕೇವಲ ಮೆಷಿನ್ ಆಗಿ ಪರಿವರ್ತಿತಗೊಳ್ಳುತ್ತದೆ.

ಮಗು ಕ್ರಮೇಣ ಖಿನ್ನತೆ ಮಾನಸಿಕ ಒತ್ತಡಕ್ಕೆ ಸಿಕ್ಕಿ ತನ್ನ ನೋವನ್ನು ಯಾರಲ್ಲೂ ಹೇಳಿಕೊಳ್ಳುವಂತಿಲ್ಲದೆ ತನ್ನ ನೋವನ್ನು ತಾನೇ ನುಂಗಿ ನುಂಗಿ ಒಬ್ಬಂಟಿತನ ಕಾಡಿ ಹಿಂಸೆ ತಾಳಲಾರದೆ ಚಿಕ್ಕ ಚಿಕ್ಕ ವಿಷಯಕ್ಕೂ ಕೋಪ ಅಸಹನೆ ಇದನ್ನು ಪ್ರಕಟಿಸಲು ಸಿಗದ ಅವಕಾಶವಿಲ್ಲದೆ ಹಗ್ಗ ಹಾಕಿಕೊಂಡು ಬಿಗಿದರೂ ನೋವಾಗದ ಸ್ಥಿತಿಗೆ ಆ ಮಗುವಿನ ಮನಸ್ಸು ಬಂದು ನಿಲ್ಲುತ್ತದೆ.ಇದಕ್ಕೆ ಕಾರಣ ಮಗುವಂತೂ ಖಂಡಿತ ಅಲ್ಲವೇ ಅಲ್ಲ.ನಾವು ಹಾಗೂ ನಮ್ಮ ಅತಿ ಆಸೆ,ದುರಹಂಕಾರ ದರ್ಪ ಇನ್ನೊಬ್ಬರೆದುರು ನಾವು ನಮ್ಮ ಮಕ್ಕಳು ಕಡಿಮೆ ಏನಲ್ಲ ಎಂಬುದನ್ನು ತೋರಿಸಲು ಹೋಗಿ ನಾವು ಮಾತ್ರವಲ್ಲ ಮಕ್ಕಳನ್ನು ಕೂಡ ಅನಾಥರನ್ನಾಗಿಸುತ್ತಿದ್ದೇವೆ.

ಸರಕಾರೀ ಶಾಲೆಗಳಲ್ಲಿ ಒತ್ತಡವಿಲ್ಲದೇ ಬೆಳೆದ ಮಕ್ಕಳು ಅತ್ಯಂತ ದೊಡ್ಡ ಹುದ್ದೆಗಳನ್ನಲಂಕರಿಸಿದ ಕಥೆ ನಾವೂ ಓದಲ್ಲ ಇತರರಿಗೂ ಹೇಳಿಕೊಟ್ಟಿಲ್ಲ.ಪಕ್ಕದ ಮನೆಯಲ್ಲಿ ಆಗೋದು ನಮ್ಮಲ್ಲೂ ಆಗಬೇಕು.ನಮ್ಮ ಅಕ್ಕನ ಮಗ ಅಥವಾ ಮಗಳು ಇಂಗ್ಲೀಷ್ ಮೀಡಿಯಂ ಶಾಲೆ ಆದರೆ ನನ್ನದೂ ಆಗಬೇಕು ನಾವು ಯಾರಿಗೂ ಕಮ್ಮಿಯಿಲ್ಲ ಅಂತ ಸಾಲಾ ಮಾಡಿಯಾದರೂ ಸಮಾಜಕ್ಕೆ ತೋರಿಸಬೇಕು.ಈ ನಮ್ಮಾಸೆಗೆ ಬಲಿಪಶು ಮುಗ್ದ ಮಕ್ಕಳು.ಧರ್ಮ ಜಾತಿ ಯಾವುದೇ ಆಗಿರಲ್ಲಿ ಮಾನವೀಯತೆಗಿಂತ ದೊಡ್ಡದು ಯಾವುದೂ ಇಲ್ಲವೇ ಇಲ್ಲ.ಗುಡಿ ಚರ್ಚ್ ಮಸೀದಿಗಳ ದೇವರಿಗಿಂತ ದೊಡ್ಡವನು ನಮ್ಮಾತ್ಮಗಳಲ್ಲಿರುವ ಭಗವಂತ ಇದನ್ನರಿತು ಇತರರಿಗೆ ಸಹಾಯ ಮಾಡುವುದನ್ನು ಮಾತ್ರ ಮಕ್ಕಳಿಗೆ ಕಳುಹಿಸಿಕೊಟ್ಟರೆ ನಾವು ನಿಜವಾದ ವಿಧ್ಯಾವಂತರ ನಾಡಿನವರೆಂದು ಕರೆಸಿಕೊಳ್ಳುತ್ತೇವೆ ಹೊರತು ಶಾಲೆಯ ಮಾರ್ಕ್ ಕಾರ್ಡಿನಿಂದಂತೂ ಅಲ್ಲವೇ ಅಲ್ಲ.

ನಾವು ನೀವೆಲ್ಲರೂ ಸೇರಿ ಇಂತಹ ಹೇರಿಕೆಯ ಬಲವಂತದ ಶಿಕ್ಷಣಕ್ಕೆ ಯಾವಾಗ ಬಹಿಷ್ಕಾರ ಹಾಕುತ್ತೇವೋ ಆಗ ಮಾತ್ರ ನಮ್ಮ ನಿಮ್ಮ ಮನೆಯ, ಪಕ್ಕದ ಮನೆಯ,ನಮ್ಮ ಊರಿನ ಜಿಲ್ಲೆಗಳ,ರಾಜ್ಯದ ದೇಶಗಳ ಕುಟುಂಬಗಳು ಹಾಗೂ ಕುಟುಂಬದ ಮಕ್ಕಳು ಸೇಫ್..

✍ದಯಾ ಆಕಾಶ್ ಕಾಸರಗೋಡು

Be the first to comment